ರಾಜೀವ್ ಗಾಂಧಿ ಹಂತಕರಂತೆಯೇ ನನ್ನನ್ನು ಬಿಡುಗಡೆಗೊಳಿಸಿ: ಮತ್ತೋರ್ವ ಕೊಲೆ ಪಾತಕಿಯಿಂದ ಬೇಡಿಕೆ

ರಾಜೀವ್ ಗಾಂಧಿ ಹಂತಕರನ್ನು ಜೈಲಿನಿಂದ ಬಿಡುಗಡೆಗೊಳಿಸಿದ ಬಳಿಕ ಜೈಲಿನಲ್ಲಿರುವ ಕೊಲೆ ಪಾತಕಿಗಳ ಮನಸ್ಸಿನಲ್ಲಿ ಹೊಸ ಆಸೆಗಳು ಚಿಗುರೊಡೆಯಲು ಆರಂಭವಾಗಿದ್ದು, ತಾವೂ ಬಿಡುಗಡೆಯಾಗುವ ಕನಸು ಕಾಣುತ್ತಿದ್ದಾರೆ.
ಹೌದು..! ಆಸ್ತಿಯ ಆಸೆಗಾಗಿ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಕೊಲೆಪಾತಕಿ ಸ್ವಾಮಿ ಶ್ರದ್ಧಾನಂದ ಎಂಬಾತ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸಿದಂತೆಯೇ ತನ್ನನ್ನೂ ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಮುಂದೆ ವಾದ ಮುಂದಿಟ್ಟಿದ್ದಾನೆ.
ಪತ್ನಿ ಶಾಖರಾ ಖಲೀಲಿಯನ್ನು ಆಸ್ತಿಯ ಆಸೆಗಾಗಿ ಮತ್ತು ಬರುವ ಔಷಧಿ ನೀಡಿ ಸಜೀವವಾಗಿ ಹೂತು ಹಾಕಿ ಹತ್ಯೆ ಮಾಡಿದ್ದ ಈತನಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿತ್ತು. ಆ ಬಳಿಕ ಈ ಶಿಕ್ಷೆಯನ್ನು ಜೀವಿತಾವಧಿ ಜೈಲುವಾಸಕ್ಕೆ ಇಳಿಸಲಾಗಿತ್ತು. ಇದೀಗ ತಾನು ರಾಜೀವ್ ಗಾಂಧಿ ಹಂತಕರಷ್ಟು ದೊಡ್ಡ ಪಾಪ ಕೃತ್ಯ ಮಾಡಿಲ್ಲ, ಅವರನ್ನು ಬಿಡುಗಡೆ ಮಾಡಿದಂತೆ ನನ್ನನ್ನೂ ಬಿಡುಗಡೆ ಮಾಡಿ ಎಂದು ಕೋರ್ಟ್ ಮೊರೆ ಹೋಗಿದ್ದಾನೆ.
ಸ್ವಾಮಿ ಶ್ರದ್ಧಾನಂದ ಒಂದು ಕೊಲೆಗಾಗಿ ಜೈಲಿನಲ್ಲಿದ್ದು, ಈಗಾಗಲೇ 29 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾನೆ. ಆತನಿಗೆ ಒಂದು ದಿನವೂ ಪರೋಲ್ ಕೂಡ ನೀಡಲಾಗಿಲ್ಲ. ಆದರೆ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರನ್ನು ಕೊಂದವರೇ ಜೈಲಿನಿಂದ ಮುಕ್ತಿ ಪಡೆದಿದ್ದಾರೆ. ಆ ಘಟನೆಯಲ್ಲಿ ರಾಜೀವ್ ಗಾಂಧಿ ಸೇರಿದಂತೆ 16 ಮಂದಿ ಮೃತಪಟ್ಟಿದ್ದರು. 43 ಮಂದಿ ಗಾಯಗೊಂಡಿದ್ದರು. 30 ವರ್ಷಗಳ ಜೈಲುವಾಸದ ಬಳಿಕ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಅವರಿಗೆ ಈ ಹಿಂದೆ ಪರೋಲ್ ಕೂಡ ನೀಡಲಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜೀವ್ ಗಾಂಧಿ ಹಂತಕರ ಪ್ರಕರಣಗಳನ್ನು ಗಮನಿಸಿದಾಗ ಸಮಾನತೆಯ ಹಕ್ಕನ್ನು ಇಲ್ಲಿ ಉಲ್ಲಂಘಿಸಲಾಗಿದೆ ಎಂದು ಶ್ರದ್ಧಾನಂದನ ವಕೀಲರಾದ ವರುಣ್ ಠಾಕೂರ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹಾಗೂ ನ್ಯಾ. ಹಿಮಾ ಕೋಹ್ಲಿ ಅವರ ಪೀಠದ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಿದ್ದಾರೆ.
ಒಟ್ಟಿನಲ್ಲಿ ರಾಜೀವ್ ಗಾಂಧಿ ಹಂತಕರ ಬಿಡುಗಡೆ ಜೈಲು ಹಕ್ಕಿಗಳಿಗೆ ಹೊಸ ಆಶಾಕಿರಣ ಸೃಷ್ಟಿಸಿದ್ದು, ಕೊಲೆ ಪಾತಕಿಗಳು ಬಿಡುಗಡೆಯ ಕನಸು ಕಾಣುವಂತಾಗಿದೆ. ಈ ಅರ್ಜಿಗೆ ಯಾವ ರೀತಿಯ ತೀರ್ಪು ಸಿಗಲಿದೆ ಅನ್ನೋದು ಕುತೂಹಲವನ್ನು ಸೃಷ್ಟಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka