ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆ: ರಾಜ್ಯಪಾಲರ ಭೇಟಿಗೆ ಮುಂದಾದ ಸಿಎಂ ಯಡಿಯೂರಪ್ಪ
ಬೆಂಗಳೂರು: ದಿಢೀರ್ ಬೆಳವಣಿಗೆಯೊಂದರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎಂದು ವರದಿಯಾಗಿದ್ದು, ಸಿಎಂ ಬದಲಾವಣೆಯ ಚರ್ಚೆ ಇನ್ನೂ ಬಿಸಿಯಾಗಿರುವಾಗಲೇ ಸಿಎಂ ರಾಜ್ಯಪಾಲರ ಭೇಟಿಗೆ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇಂದು ಸಂಜೆ 5:30ಕ್ಕೆ ಯಡಿಯೂರಪ್ಪನವರು ರಾಜ್ಯಪಾಲರನ್ನು ಭೇಟಿಯಾಗಲು ಸಮಯಕೋರಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಆದರೂ, ಯಡಿಯೂರಪ್ಪನವರೇ ಮುಂದಿನ 2 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ.
ಒಂದೆಡೆ ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿಯ ಬಳಿಕ ಭಿನ್ನವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯತ್ನಾಳ್ ಹಾಗೂ ಯೋಗೇಶ್ವರ್ ಪ್ರತ್ಯೇಕ ಸಭೆಯನ್ನು ನಡೆಸಿದ್ದಾರೆ ಎನ್ನುವ ವರದಿಗಳು ಕೂಡ ಈ ನಡುವೆ ಕಂಡು ಬಂದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿಎಂ ಯಡಿಯೂರಪ್ಪ ರಾಜ್ಯಪಾಲರ ಭೇಟಿಗೆ ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಯಡಿಯೂರಪ್ಪನವರು ಯಾವ ಕಾರಣಕ್ಕಾಗಿ ರಾಜ್ಯಪಾಲರನ್ನು ಭೇಟಿಯಾಗಲು ಮುಂದಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಆದರೆ ಬಿಜೆಪಿ ನಾಯಕರ ವರ್ಣ ರಂಜಿತ ನಾಯಕತ್ವ ಬದಲಾವಣೆಯ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.