ರಾಜ್ಯದಲ್ಲಿ ಲಾಕ್ ಡೌನ್ ಇರುತ್ತಾ? | ಸಿಎಂ ಯಡಿಯೂರಪ್ಪ ಏನು ಹೇಳಿದರು?
13/04/2021
ಬೀದರ್: ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಜಾರಿಯ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಲಾಕ್ ಡೌನ್ ಜಾರಿ ಮಾಡಲು ಸಲಹಾ ಸಮಿತಿ ಸೂಚನೆ ನೀಡಿಲ್ಲ. ಸಮಿತಿಯಲ್ಲಿ ನಾನು ಕೂಡ ಇದ್ದೇನೆ. ಸಮಿತಿ ಆ ರೀತಿ ಸೂಚಿಸಿಲ್ಲ, ಸಲಹೆ ನೀಡಿಲ್ಲ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿಕೆಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದೆ ಏನೇನು ಮಾಡಬೇಕೆಂದು ತೀರ್ಮಾನ ಮಾಡಲಾಗುವುದು. ಕೊರೋನಾ ತಡೆಯಲು ಜನತೆ ಸಹಕಾರ ನೀಡಬೇಕು. ಜನ ಇದನ್ನು ಮರೆತರೆ ಅನಾಹುತ ಆಗಲಿದೆ ಎಂದು ಹೇಳಿದ್ದಾರೆ.
ಸರ್ವಪಕ್ಷ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬರುವುದಿಲ್ಲ ಎಂಬ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಅವರು, ಸಭೆಗೆ ಕರೆಯುತ್ತೇವೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಸಭೆ ಕರೆಯಿರಿ ಎಂದು ಅವರು ಹೇಳಿದ್ದರು. ಈಗ ಬರುವುದಿಲ್ಲ ಅಂತಿದಾರೆ ಎಂದರು.