ನಿಜವಾಗಿಯೂ ರಾಕ್ಷಸರು ಮತ್ತು ದೇವತೆಗಳು ಇದ್ದಾರೆಯೇ? | ಒಂದು ವೇಳೆ  ಅವರು ಇದ್ದರೆ ಈಗ ಎಲ್ಲಿದ್ದಾರೆ? - Mahanayaka
8:24 PM Wednesday 11 - December 2024

ನಿಜವಾಗಿಯೂ ರಾಕ್ಷಸರು ಮತ್ತು ದೇವತೆಗಳು ಇದ್ದಾರೆಯೇ? | ಒಂದು ವೇಳೆ  ಅವರು ಇದ್ದರೆ ಈಗ ಎಲ್ಲಿದ್ದಾರೆ?

14/11/2020

ಬಹುತೇಕ ಪುರಾಣ ಕಥೆಗಳನ್ನು ನೀವು ಓದಿರ ಬಹುದು. ಅದರಲ್ಲಿ ದೇವತೆಗಳು ಮತ್ತು ರಾಕ್ಷಸರಿಗೆ ಯುದ್ಧವಾಗುತ್ತದೆ. ರಾಕ್ಷಸರನ್ನು ದೇವತೆಗಳು ನಾನಾ ಉಪಾಯಗಳ ಮೂಲಕ ಕೊಲ್ಲುತ್ತಲೇ ಹೋಗುತ್ತಾರೆ. ಇದೇ ಪುರಾಣದ ಕಥೆಗಳು ಇಂದು ಭಾರತೀಯ ಹಬ್ಬಗಳಾಗಿ ಆಚರಣೆಯಾಗುತ್ತಿದೆ.  ಆದರೆ ಪುರಾಣಗಳು ಸತ್ಯವೇ? ಸುಳ್ಳೆ? ರಾಕ್ಷಸರು ಇದ್ದರೆ, ಇಲ್ಲವೇ? ಎಂಬೆಲ್ಲ ಪ್ರಶ್ನೆಗಳಿಗೆ ಎಲ್ಲಿಯೂ ಸಮರ್ಪಕವಾದ ಉತ್ತರಗಳು ದೊರೆಯುವುದಿಲ್ಲ.

ಸದ್ಯ ದೇಶಾದ್ಯಂತ ದೀಪಾವಳಿ ಆಚರಣೆ ನಡೆಯುತ್ತಿದೆ.  ನರಕಾಸುರ ಎಂಬ ರಾಕ್ಷಸನನ್ನು ಕೊಂದ ದಿನ, ಶ್ರೀರಾಮನು ರಾಕ್ಷಸ ರಾಜ ರಾವಣನನ್ನು ಕೊಂದ ದಿನ ಮೊದಲಾದ ಹಲವು ಬಗೆಯ ಕಥೆಗಳನ್ನು ಆಧಾರವಾಗಿಟ್ಟುಕೊಂಡು, ಹಬ್ಬಗಳನ್ನು ಆಚರಣೆ ಮಾಡಲಾಗುತ್ತಿದೆ. ಎಷ್ಟೋ ವರ್ಷಗಳ ಹಿಂದೆ ಭೂಮಿಯಲ್ಲಿ ರಾಕ್ಷಸರು ಇದ್ದರಂತೆ, ಅವರು ದೇವತೆಗಳಿರುವ ಸ್ವರ್ಗ ಲೋಕಕ್ಕೆ ದಾಳಿ ಮಾಡುತ್ತಿದ್ದರಂತೆ, ಅಲ್ಲಿ ದೇವತೆಗಳನ್ನು ಸೋಲಿಸಿ, ಬಳಿಕ ದೇವತೆಗಳು ಓಡಿ ಹೋಗಿ ಕೃಷ್ಣನಿಗೆ ದೂರು ನೀಡಿ, ಕೃಷ್ಣ ನಾನಾ ಅವತಾರಗಳನ್ನು ತಾಳಿ ರಾಕ್ಷಸರನ್ನು ವಧೆ ಮಾಡುತ್ತಿದ್ದನಂತೆ, ಇವೆಲ್ಲ ಎಲ್ಲರೂ ಓದಿರುವ ಕಥೆಗಳು. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ, “ಈ ದೇಶದ ನಿಜವಾದ ಇತಿಹಾಸವನ್ನು ಮರೆಮಾಚಿ, ಇತಿಹಾಸವನ್ನು ಪುರಾಣಗಳ ರೂಪದಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ರಂಜಿಸುವ ಕಥೆಗಳನ್ನಾಗಿ ಮಾಡಲಾಗಿದೆ” ಎಂದು ಹೇಳುತ್ತಾರೆ.

ಹೌದು…! ಈ ರಾಕ್ಷಸ ಹಾಗೂ ದೇವತೆ ಎಂಬ ಪರಿಕಲ್ಪನೆ, ಶೂದ್ರ ಮತ್ತು ಬ್ರಾಹ್ಮಣ ವರ್ಗವು ಅಧಿಕಾರಕ್ಕಾಗಿ ನಡೆಸಿಕೊಂಡು ಬಂದ ಹೋರಾಟವನ್ನು ಸೂಚಿಸುತ್ತದೆ ಎಂದು ಬಹುತೇಕ ಅಂಬೇಡ್ಕರ್ ವಾದಿಗಳು ಹೇಳುತ್ತಾರೆ.  ಕಪ್ಪು ಬಣ್ಣ, ಬಲಾಢ್ಯ ದೈತ್ಯ ದೇಹ, ಸಾಮರ್ಥ್ಯವನ್ನು ಹೊಂದಿರುವ ಶೂದ್ರರನ್ನು ರಾಕ್ಷಸರು ಎಂದು ಕರೆಯಲಾಗಿದೆ. ಜನಿವಾರ ಧರಿಸಿ, ಬಿಳಿ ಬಣ್ಣ ಹೊಂದಿರುವ ಬ್ರಾಹ್ಮಣರನ್ನು ದೇವತೆಗಳು ಎಂದು ವರ್ಣಿಸಲಾಗಿದೆ ಎಂದು ಹಲವಾರು ವಿಮರ್ಷಕರು ಅಭಿಪ್ರಾಯಪಡುತ್ತಾರೆ. ಹೀಗಾಗಿಯೇ ದೀಪಾವಳಿ ಮಾತ್ರವಲ್ಲದೇ ಭಾರತದ ಎಲ್ಲಾ ಹಬ್ಬಗಳನ್ನು ಪ್ರತಿಯೊಬ್ಬರೂ ವಿಭಿನ್ನವಾಗಿ ಆಚರಿಸುತ್ತಾರೆ.

ದೇವತೆಗಳು ಯಜ್ಞ ಮಾಡುತ್ತಿದ್ದರು. ಈ ಯಜ್ಞಕ್ಕೆ ಮರಗಳನ್ನು ಕಡಿಯುತ್ತಿದ್ದರು. ಪ್ರಾಣಿಗಳನ್ನು ಬಲಿಕೊಡುತ್ತಿದ್ದರು. ಹಾಗಾಗಿ ಮೂಲನಿವಾಸಿ ರಾಜರು(ರಾಕ್ಷಸರು) ಈ ಯಜ್ಞವನ್ನು ತಡೆಯುತ್ತಿದ್ದರು. ಯಜ್ಞ ಮಾಡಲು ಬಿಡದ ರಾಜ(ರಾಕ್ಷಸ)ನನ್ನು ದೇವತೆಗಳು ಉಪಾಯವಾಗಿ ಕೊಲ್ಲುತ್ತಿದ್ದರು ಎನ್ನುವ ವಿಮರ್ಶೆಗಳೂ ಇವೆ. ರಾಕ್ಷಸ ಎಂಬ ಪದದ ಅರ್ಥ ‘ರಕ್ಷಕ’ ಎಂದಾಗಿದೆ. ಆದರೆ, ಈ ಪದವನ್ನು ಕೆಟ್ಟವರು ಎಂದು ಬಿಂಬಿಸಿಕೊಂಡು ಬರಲಾಗಿದೆ. ದಲಿತರು ಅಥವಾ ಶೂದ್ರರನ್ನು ರಾಕ್ಷಸರು, ಅಸುರರು ಎಂಬೆಲ್ಲ ರೀತಿಯಾಗಿ ಪುರಾಣಗಳಲ್ಲಿ ಬಿಂಬಿಸಲಾಗಿದೆ. ಈ ಪದಗಳ ಅರ್ಥವನ್ನು ಗಮನಿಸುತ್ತಾ ಹೋದರೆ, ಸುರಪಾನ ಎಂದರೆ, ಮದ್ಯಪಾನ ಎಂದರ್ಥ, ಹಾಗಿದ್ದರೆ ಮದ್ಯಪಾನ ಮಾಡುವವನನ್ನು ಸುರ ಎಂದು ಕರೆಯುತ್ತಾರೆ. ಅಸುರ ಎಂದರೆ, ಮದ್ಯವನ್ನು ಸೇವಿಸದವನು ಎಂದರ್ಥ. ಇತಿಹಾಸದಲ್ಲಿ ಮದ್ಯ ಸೇವನೆಯನ್ನು ಅಸುರರು ಮಾಡುತ್ತಿರಲಿಲ್ಲ. ಇದು ವಿದೇಶದಿಂದ ಬಂದ ಆರ್ಯರ ಮೂಲಕ ಭಾರತಕ್ಕೆ ಸಮುದ್ರದ ಮೂಲವಾಗಿ ಬಂತು ಹೀಗಾಗಿ ಸಮುದ್ರ ಮಂಥನದಲ್ಲಿ ಸುರಪಾನ ಉದಯವಾಯಿತು ಎನ್ನುವುದನ್ನು ಕಥೆಯ ಮೂಲಕ ಹೇಳಲಾಗಿದೆ ಎಂದು ಹೇಳುತ್ತಾರೆ.

ದೀಪಾವಳಿಯ ಸಂದರ್ಭದಲ್ಲಿ ಕೂಡ, ದೇವತೆಗಳಿಗೆ ಇದೊಂದು ಸಂಭ್ರಮದ ಆಚರಣೆಯಾಗಿದ್ದರೆ, ರಾಕ್ಷಸರಿಗೆ ನೋವಿನ, ದುಃಖದ ಆಚರಣೆ. ಈ ದಿನ ರಾಕ್ಷಸರು, ತಮ್ಮ ಪೂರ್ವಿಕರಿಗೆ ಎಡೆ ಇಡುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಈ ಆಚರಣೆ ಇಡೀ ಭಾರತದಲ್ಲಿದೆ. ಕರಾವಳಿಯಲ್ಲಿ ಅವಲಕ್ಕಿಯನ್ನು ಬಡಿಸಿ, ತಮ್ಮ ಪೂರ್ವಿಕರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಉಳಿದ ಪ್ರದೇಶಗಳಲ್ಲಿ ಎಡೆ ಇಡುವ ಸಂಪ್ರದಾಯವಿದೆ.

ಹೀಗೆ ಭಾರತದಲ್ಲಿ ರಾಕ್ಷಸರು ಮತ್ತು ದೇವತೆಗಳ ನಡುವೆ ಇಂದಿಗೂ ರಾಜಕೀಯ ತಿಕ್ಕಾಟ ಮುಂದುವರಿಯುತ್ತಲೇ ಇದೆ. ಇದು ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟ. ಅದು ಆರ್ಯರು ಭಾರತಕ್ಕೆ ಆಗಮಿಸಿದಲ್ಲಿಂದ ಆರಂಭಗೊಂಡಿದೆ. ಆರ್ಯರು ಚೆನ್ನಾಗಿ ಕಥೆಗಳನ್ನು ಬಳಸಿಕೊಂಡು ಈಗಲೂ ಅದೇ ಕಥೆಗಳ ಮೂಲಕವೇ ಅಧಿಕಾರವನ್ನು ತಮ್ಮ ಕೈಯಲ್ಲಿ ಭದ್ರವಾಗಿಟ್ಟುಕೊಂಡು ಸುಖವಾಗಿ ಜೀವಿಸುತ್ತಿದ್ದಾರೆ. ಆದರೆ, ರಾಕ್ಷಸರು ಇಂದಿಗೂ ಅಧಿಕಾರವಿಲ್ಲದೇ ಅಸಹಾಯಕವಾಗಿದ್ದರೆ, ರಾಕ್ಷಸರಲ್ಲಿ ಬದಲಾದ ಪೀಳಿಗೆಯು, ಸ್ವಂತಿಕೆಯನ್ನು ಕಳೆದುಕೊಂಡು ದೇವತೆಗಳ ಗುಲಾಮರಾಗುತ್ತಿದ್ದಾರೆ. ತಮ್ಮ ಪೂರ್ವಿಕರ ಸಾವನ್ನು ದೇವತೆಗಳು ಸಂಭ್ರಮದಿಂದ ಆಚರಿಸುವ ಸಂದರ್ಭದಲ್ಲಿ ಇತಿಹಾಸವೇ ತಿಳಿಯದೇ ಅವರ ಜೊತೆಗೆ ಹೋಗಿ ತಮ್ಮ ಪೂರ್ವಿಕರ ಸಾವಿಗೆ ಸಂಭ್ರಮ ಪಡುವ ನೀಚ ಸ್ಥಿತಿಯಲ್ಲಿದ್ದಾರೆ. ಇತಿಹಾಸದ ಅರಿವಿಲ್ಲದೇ ಹೀನಾಯವಾಗಿ ಬದುಕುತ್ತಿದ್ದಾರೆ.

ಅಂದು ಆರ್ಯರೊಂದಿಗೆ ಸಮುದ್ರದ ಮೂಲಕ ಬಂದ ಸುರಪಾನ ಈಗ ಅಸುರರ ಪಾನವಾಗಿ ಬದಲಾಗಿದೆ. ರಾಕ್ಷಸರು ಮದ್ಯದ ಮತ್ತಿನಲ್ಲಿ ತೇಲುತ್ತಾ ಹೀನಾಯ ಬದುಕು ಸಾಗಿಸುತ್ತಿದ್ದಾರೆ.  ರಾಜಕಾರಣಿಗಳು ತಮ್ಮ ಆಸ್ತಿ ಏರಿಕೆಯಲ್ಲಿ ತೊಡಗಿದ್ದಾರೆ. ಸರ್ಕಾರಿ ನೌಕರಿ ಪಡೆದ ರಾಕ್ಷಸರು ದೇವತೆಗಳ ಅಡಿಯಾಳುಗಳಾಗಿ ತಮ್ಮ ಪೂರ್ವಿಕರ ಸಾವಿಗಾಗಿ ಮಾಡುತ್ತಿರುವ ಹಬ್ಬಕ್ಕೆ ತಾವು ಒಂದೆರಡು ಪಟಾಕಿ ಸಿಡಿಸಿ, ಸಿಹಿ ಮಾಡಿ ಸಂಭ್ರಮಿಸುತ್ತಿದ್ದಾರೆ. ತಮ್ಮ ಸಮುದಾಯದವರು ಸಮೀಪ ಬಂದರೆ, ಅವರಲ್ಲೂ ಅಸ್ಪೃಶ್ಯತೆ ತೋರಿಸುತ್ತಿದ್ದಾರೆ. ಸ್ವಾರ್ಥದ ಬದುಕು ಕಟ್ಟಿಕೊಂಡು ತಮ್ಮ ಬೆಳವಣಿಗೆ ಮಾತ್ರವೇ ನೋಡುತ್ತಿದ್ದಾರೆ.  ಇನ್ನು ಕೆಲವು ರಾಕ್ಷಸರಿಗೆ ಲೋಕ ಜ್ಞಾನವೇ ಇಲ್ಲವಾಗಿದೆ. ಬೆಳೆಯುತ್ತಿರುವ ಆಧುನಿಕ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೇ ಇಲ್ಲವಾಗಿದೆ. ಸುರಪಾನವನ್ನು ವಿರೋಧಿಸುತ್ತಿದ್ದ ರಾಕ್ಷಸರು ಸುರಪಾನದಿಂದಾಗಿ ತಮ್ಮ ಕುಟುಂಬವನ್ನು ಹೀನಾಯ ಸ್ಥಿತಿಯಲ್ಲಿಟ್ಟಿದ್ದಾರೆ. ಇಷ್ಟೊಂದು ಸಮಸ್ಯೆಗಳನ್ನು ಎದುರಿಸುತ್ತಿರುವ ರಾಕ್ಷಸರು, ಅಧಿಕಾರ ಹಿಡಿಯಲು ಹೇಗೆ ಸಾಧ್ಯ?

ಇತ್ತೀಚಿನ ಸುದ್ದಿ