ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಸಾಂವಿಧಾನಿಕ ಹಕ್ಕು ನಮಗಿದೆ | ಸು.ಕೋರ್ಟ್ ತೀರ್ಪಿಗೆ ರೈತರ ಪ್ರತಿಕ್ರಿಯೆ
ನವದೆಹಲಿ: ರೈತರು ಜ.26ರಂದು ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೇ, ಜ.26ರಂದು ಟ್ರಾಕ್ಟರ್ ರ್ಯಾಲಿ ನಡೆಸಲು ನಾವು ಸಂವಿಧಾನಿಕ ಹಕ್ಕನ್ನು ಹೊಂದಿದ್ದೇವೆ ಎಂದು ರೈತರು ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರು ದೆಹಲಿಗೆ ಪ್ರವೇಶಿಸುವ ಬಗ್ಗೆ ಮೊದಲು ನಿರ್ಧರಿಸಬೇಕಾದವರು ದೆಹಲಿ ಪೊಲೀಸರು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೆ ರೈತ ಮುಖಂಡರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (ಲಖೋವಾಲ್) ಪಂಜಾಬ್ ನ ಪ್ರಧಾನ ಕಾರ್ಯದರ್ಸಿ ಪರಮ್ಜೀತ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ರೈತರು ರಾಜ್ ಪಥ್ ಅಥವಾ ಹೆಚ್ಚಿನ ಭದ್ರತೆ ಇರುವ ಪ್ರದೇಶಗಳಲ್ಲಿ ರ್ಯಾಲಿ ನಡೆಸಲು ಹೊರಟಿಲ್ಲ, ದೆಹಲಿಯ ಹೊರ ವರ್ತುಲ ರಸ್ತೆಯಲ್ಲಿ ಮಾತ್ರ ಟ್ರ್ಯಾಕ್ಟರ್ ರ್ಯಾಲಿ ನಡೆಸಲಿದ್ದಾರೆ, ಆದ್ದರಿಂದ ಅಧಿಕೃತ ರಿಪಬ್ಲಿಕ್ ಡೇ ಪರೇಡ್ ಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ನಾವು ರ್ಯಾಲಿ ನಡೆಸುತ್ತೇವೆ, ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿ ಖಂಡಿತವಾಗಿಯೂ ನಾವು ದೆಹಲಿ ಪ್ರವೇಶಿಸುತ್ತೇವೆ ಎಂದು ಸಿಂಗ್ ತಿಳಿಸಿದ್ದಾರೆ.
ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ನೀಡದೇ ಇದ್ದರೆ, ರೈತರ ನಿಲುವು ಏನಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ರೈತ ಮುಖಂಡರು. ಶಾಂತಿಯುತ ರ್ಯಾಲಿಗೆ ನಮಗೆ ಸಾಂವಿಧಾನಿಕ ಹಕ್ಕು ಇದೆ ಎಂಬ ಹೇಳಿಕೆ ನೀಡಿದ್ದು, ಈ ಮೂಲಕ ಟ್ರ್ಯಾಕ್ಟರ್ ರ್ಯಾಲಿ ಖಚಿತ ಎಂಬ ಪರೋಕ್ಷ ಸಂದೇಶವನ್ನು ರೈತರು ಸರ್ಕಾರಕ್ಕೆ ರವಾನಿಸಿದ್ದಾರೆ.