ರಾಮಮಂದಿರ ದೇಣಿಗೆ ಸಂಗ್ರಹ ಮೆರವಣಿಗೆಯ ಸಂದರ್ಭ ಘರ್ಷಣೆ
ಗಾಂಧಿಧಾಮ: ರಾಮಮಂದಿರದ ರಾಲಿಯ ಸಂದರ್ಭದಲ್ಲಿ ಎರಡು ಸಮುದಾಯದ ನಡುವೆ ಘರ್ಷಣೆ ನಡೆದಿದ್ದು, ಪರಿಣಾಮವಾಗಿ ಮೂವರು ಗಾಯಗೊಂಡಿದ್ದಾರೆ. ಓರ್ವ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಭಾನುವಾರ ಸಂಜೆ ರಾಲಿಯ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು. ಈ ವೇಳೆ ಎರಡು ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಪರಸ್ಪರ ಕಲ್ಲು ತೂರಾಟ ಕೂಡ ನಡೆದಿದೆ.
ಘಟನೆ ನಡೆದ ಸ್ಥಳದಿಂದ 200 ಮೀಟರ್ ದೂರದ ಕಿದ್ನಾ ಗ್ರಾಮದಲ್ಲಿ ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಈತ ಘರ್ಷಣೆಯಲ್ಲಿ ಮೃತಪಟ್ಟಿದ್ದಾನೆಯೇ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತ ಯುವಕ ಜಾರ್ಖಾಂಡ್ ನಿಂದ ಆಟೋ ರಿಕ್ಷಾದ ಮೂಲಕ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಚೂರಿಯಿಂದ ಇರಿದಿದ್ದಾರೆ ಎಂದು ಹೇಳಲಾಗಿದೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.