ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಬಾಬರಿ ಮಸೀದಿ ಪರ ಅರ್ಜಿದಾರ!
16/01/2021
ಲಕ್ನೋ: ಅಯೋಧ್ಯೆ ವಿವಾದದಲ್ಲಿ ಬಾಬರಿ ಮಸೀದಿ ಪರ ಅರ್ಜಿದಾರ ಇಕ್ಬಾಲ್ ಅನ್ಸಾರಿ, ಖುದ್ದು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದು, ತಾವೂ ಸಹ ದೇಣಿಗೆ ನೀಡಿದ್ದಾರೆ. ಕೋಮು ಸೌಹಾರ್ದತೆ ಮೂಡಿಸಲು ಇಂತಹ ಧಾರ್ಮಿಕ ಉದ್ದೇಶದ ಪರವಾಗಿ ನಿಲ್ಲುವುದರಲ್ಲಿ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ದೇಶ-ವಿದೇಶಗಳಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನ ನಡೆಯುತ್ತಿದೆ. ಮಂದಿರ ನಿರ್ಮಾಣ ಮಾಡಲು ಜನರು ತಂತಮ್ಮ ಆರ್ಥಿಕ ಚೇತನಕ್ಕೆ ಅನುಗುಣವಾಗಿ 10 ರೂಪಾಯಿ, 100 ರೂ, 1000ರೂ.ಗಳ ವಿವಿಧ ಮುಖಬೆಲೆಯ ದೇಣಿಗೆಗಳನ್ನು ಕೊಡಬಹುದಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೇಳಿದೆ.
ಮನೆ ಮನೆ ಬಾಗಿಲಿಗೆ ತೆರಳಿ ದೇಣಿಗೆ ಸಂಗ್ರಹ ಮಾಡಲೆಂದು ವಿಶ್ವ ಹಿಂದೂ ಪರಿಷತ್ ಐದು ಲಕ್ಷ ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದು, ಈ ಕಾರ್ಯಕ್ರಮವು ಜನವರಿ 15ರಿಂದ ಫೆಬ್ರವರಿ 27ರವರೆಗೂ ಜರುಗಲಿದೆ. ರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಐದು ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ.