ಜೆಡಿಎಸ್ –-ಬಿಜೆಪಿ ಹೊಂದಾಣಿಕೆಯಿಂದ ಅತೃಪ್ತರಾದವರನ್ನು ಕಾಂಗ್ರೆಸ್ʼಗೆ ಆಹ್ವಾನಿಸಿದ ರಮಾನಾಥ ರೈ
30/11/2023
ಮಂಗಳೂರು: ಜೆಡಿಎಸ್ ಪಕ್ಷವು ಬಿಜೆಪಿ ಜತೆ ಹೊಂದಾಣಿಕೆ ಮಾಡುವ ವಿಷಯದಿಂದ ಅತೃಪ್ತರಾಗಿರುವ ಜಾತ್ಯತೀತ ಮನಸ್ಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಹ್ವಾನ ನೀಡಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬರುವ ಜಾತ್ಯತೀತ ಮನಸ್ಕರಿಗೆ ಸ್ವಾಗತವಿದೆ. ಅವರನ್ನು ಗೌರವದಿಂದ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿ ಜತೆ ಹೊಂದಾಣಿಕೆಗೆ ಮನಸ್ಸಿಲ್ಲದ ಜಿಲ್ಲೆಯ ಬಹಳಷ್ಟು ಮಂದಿ ಜೆಡಿಎಸ್ ನಲ್ಲಿದ್ದಾರೆ. ಕೋಮುಸೂಕ್ಷ್ಮ ಎಂಬ ಹಣೆಪಟ್ಟಿ ಕಟ್ಟಿರುವ ದ.ಕ. ಜಿಲ್ಲೆಯಲ್ಲಿ ಜಾತ್ಯತೀತ ಶಕ್ತಿ ಹಾಗೂ ಕೋಮು ಸೌಹಾರ್ದವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಜತೆ ಸೇರಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಕ್ಕಾಗಿ ಜಾತ್ಯತೀತ ಮನಸ್ಕರ ಅಗತ್ಯವಿದೆ. ಎಲ್ಲರೂ ಒಗ್ಗಟ್ಟಾಗಿ ಕೋಮು ಶಕ್ತಿಗಳ ವಿರುದ್ಧ ಹೋರಾಡುವ ಅನಿವಾರ್ಯತೆ ಇದೆ ಎಂದರು.