“ಸಮ್ಮತಿಯ ದೈಹಿಕ ಸಂಪರ್ಕ ಅಪರಾಧ ಅಲ್ಲ, ರಮೇಶ್ ಜಾರಕಿಹೊಳಿ ರಾಜೀನಾಮೆ ಅಗತ್ಯವಿಲ್ಲ”
ಉಡುಪಿ: ಸಮ್ಮತಿಯಿಂದ ಬೆಳೆಸಿದ ದೈಹಿಕ ಸಂಪರ್ಕ ಅಪರಾಧ ಅಲ್ಲ, ರಮೇಶ್ ಜಾರಕಿಹೊಳಿ ರಾಜೀನಾಮೆ ಅಗತ್ಯವಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದು, ಆಕಸ್ಮಿಕವಾದ ಘಟನೆಗೆ ರಮೇಶ್ ಜಾರಕಿಹೊಳಿ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಜಾರಕಿಹೊಳಿ ಅವರಿಗೆ ಪಕ್ಷದ ಕಡೆಯಿಂದು ಏನೂ ತೊಂದರೆ ಮಾಡಿಲ್ಲ, ಆಕಸ್ಮಿಕ ಘಟನೆಗೆ ಅವರು ಬಲಿಯಾಗಿದ್ದಾರೆ ಅಷ್ಟೆ. ಅವರ ಮೇಲೆ ನಾವೆಲ್ಲ ಅನುಕಂಪ ಇಟ್ಟುಕೊಂಡಿದ್ದೇವೆ. ಇದೊಂದು ಕಾನೂನಾತ್ಮಕ ಮತ್ತು ನೈತಿಕ ವಿಚಾರ. ಹಾಗಾಗಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಕಾನೂನಾತ್ಮಕವಾಗಿಯೂ ಯಾವುದೇ ಸಮಸ್ಯೆ ಇದೆ ಅನ್ನಿಸಲ್ಲ ಎಂದು ಅವರು ಹೇಳಿದರು.
ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ, ಹೀಗೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಹೆಣ್ಣು ಮಗಳ ವರ್ತನೆ ನೋಡಿದರೆ, ಆಕೆ ಇಚ್ಛೆಪಟ್ಟು ಹೋಗಿದ್ದಾರೆ ಅನ್ನೋ ಭಾವನೆ ಬರುತ್ತದೆ. ಹಾಗಾಗಿ ಜಾರಕಿಹೊಳಿಗೆ ಶಿಕ್ಷೆ ಆಗಲಾರದು ಎಂದ ಮಾಧುಸ್ವಾಮಿ, ಪ್ರಕರಣ ನ್ಯಾಯಾಲಯದಲ್ಲಿ ಇದ್ದಾಗ ಯಾರನ್ನು ಕೂಡ ದೂರಲು ಸಾಧ್ಯವಿಲ್ಲ, ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು.