ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ತಂದೆಯಿಂದಲೇ ಅತ್ಯಾಚಾರ: ತಾಯಿ, ಚಿಕ್ಕಮ್ಮನಿಂದ ಸಹಕಾರ!
ಪಾಟ್ನಾ: ಜನ್ಮ ನೀಡಿದ ತಂದೆಯೇ ತನ್ನಿಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷಗಳ ವರೆಗೆ ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿದೆ.
ಬಿಹಾರದಲ್ಲಿ ಈ ಘೋರ ಘಟನೆ ನಡೆದಿದೆ. ಗಂಡು ಮಗು ಹುಟ್ಟ ಬೇಕಿದ್ದರೆ, ನಿನ್ನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಬೇಕು ಎನ್ನುವ ಧಾರ್ಮಿಕ ಮಂತ್ರವಾದಿಯೊಬ್ಬನ ಸಲಹೆಯಂತೆ ತಂದೆಯು ಬಾಲಕಿಯರ ತಾಯಿ ಹಾಗೂ ಚಿಕ್ಕಮ್ಮ ಸಹಕಾರದೊಂದಿಗೆ ಇಬ್ಬರು ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ಇದೊಂದು ಹಳೆಯ ಪ್ರಕರಣವಾಗಿದೆ. ತಂದೆಯ ನಿರಂತರ ಅತ್ಯಾಚಾರದಿಂದ ಬೇಸತ್ತ ಪುತ್ರಿಯರು ಕೊನೆಗೂ ಪೊಲೀಸರಿಗೆ ವಿಚಾರ ತಿಳಿಸಿದ್ದರು. ಕಳೆದ 10 ವರ್ಷಗಳಿಂದ ತಂದೆಯಿಂದ ಅತ್ಯಾಚಾರಕ್ಕೊಳಗಾಗಿದ್ದ ಪುತ್ರಿಯರಿಗೆ ಇದೀಗ ನ್ಯಾಯದೊರಕಿದೆ.
ಬಕ್ಸಾರ್ ಜಿಲ್ಲೆಯ ಸ್ಥಳೀಯ POCSO ನ್ಯಾಯಾಲಯವು ಆರೋಪಿ ತಂದೆ ಬಿನೋದ್ ಕುಮಾರ್ ಸಿಂಗ್ ಮತ್ತು ತಂತ್ರಿ ಅಜಯ್ ಕುಮಾರ್‌ಗೆ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಅತ್ಯಾಚಾರಕ್ಕೆ ಪ್ರೇರೇಪಿಸಿದ ಸಂತ್ರಸ್ತ ಹೆಣ್ಣುಮಕ್ಕಳ ತಾಯಿ ಹಾಗೂ ಚಿಕ್ಕಮ್ಮನಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.