ರಾಜಕೀಯ ಮಾತುಗಳು ರಾಷ್ಟ್ರಧ್ವಜದ ವಿಚಾರದಲ್ಲಿ ಬೇಡ: ಸಚಿವೆ ಶೋಭಾ ಕರಂದ್ಲಾಜೆ - Mahanayaka
2:57 PM Thursday 12 - December 2024

ರಾಜಕೀಯ ಮಾತುಗಳು ರಾಷ್ಟ್ರಧ್ವಜದ ವಿಚಾರದಲ್ಲಿ ಬೇಡ: ಸಚಿವೆ ಶೋಭಾ ಕರಂದ್ಲಾಜೆ

shobha karandlaje
13/08/2022

ಉಡುಪಿ: ತಿರಂಗಕ್ಕಾಗಿ ಲಕ್ಷಾಂತರ ಜನ ಪ್ರಾಣ ತೆತ್ತಿದ್ದಾರೆ. ಲಕ್ಷಾಂತರ ಜನ ಜೈಲು ಸೇರಿದ್ದಾರೆ, ನೇಣುಗಂಬಕ್ಕೇರಿದ್ದಾರೆ. ಕೆಂಪುಕೋಟೆಯ ಮೇಲೆ ಧ್ವಜ ಹಾರಲು ಹಲವಾರು ಪ್ರಾಣ ತ್ಯಾಗಗಳಾಗಿವೆ. ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆಯುತ್ತಿದ್ದು, ಪ್ರತಿ ಮನೆ ಪ್ರತಿ ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ತ್ರಿವರ್ಣ ಧ್ವಜ ಒಂದು ಧರ್ಮದ ಸಂಕೇತವಲ್ಲ. ತ್ರಿವರ್ಣ ಧ್ವಜ ಹಾರಿಸಲು ಇದ್ದ ನಿಬಂಧನೆಗಳನ್ನು ಮೂರು ದಿನ ತೆಗೆದುಹಾಕಲಾಗಿದೆ. ಜಾತಿ ಧರ್ಮ ಪಕ್ಷದ ಬಂಧನಗಳನ್ನು ಹೊರತುಪಡಿಸಿ ಅಮೃತ ಮಹೋತ್ಸವ ನಡೆಯುವ ವಿಶ್ವಾಸವಿದೆ ಎಂದರು.

ಮಕ್ಕಳು ಮತ್ತು ಯುವ ಜನಾಂಗಕ್ಕೆ ದೇಶಭಕ್ತಿಯ ಮರುಪೂರಣವಾಗಬೇಕು ಎಂದ ಅವರು, ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಟೀಕಿಸುವವರ ಮನಸ್ಸು ಕಲುಶಿತವಾಗಿದೆ ಎಂದರು.

ಸ್ವಾತಂತ್ರ್ಯಕ್ಕಾಗಿ ಮಡಿದವರು ಮತ್ತು ದೇಶದ ಗಡಿ ಕಾಯುತ್ತಿರುವ ಯೋಧರಿಗಾಗಿ ತಿರಂಗ ಹರಿಸಿ. ರಾಜಕೀಯ ಮಾತುಗಳು ರಾಷ್ಟ್ರಧ್ವಜದ ವಿಚಾರದಲ್ಲಿ ಬೇಡ ಎಂದು ಇದೇ ವೇಳೆ ಅವರು ಹೇಳಿದರು.

ಪ್ರವೀಣನನ್ನು ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆ ಆಗಬೇಕು:

ಇದೇ ವೇಳೆ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಪ್ರತಿಕ್ರಿಯಿಸಿದ ಅವರು,  ಪ್ರವೀಣ್ ನೆಟ್ಟಾರು ಯಾವುದೇ ವಿವಾದಗಳಲ್ಲಿಲ್ಲದ ವ್ಯಕ್ತಿ. ಹಿಂದೂ ಯುವಕರ ಹತ್ಯೆ ಮಾಡುವವರ ಮಾನಸಿಕತೆ ಏನೆಂದೇ ಅರ್ಥವಾಗುತ್ತಿಲ್ಲ. ಪ್ರವೀಣನನ್ನು ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆ ಆಗಬೇಕು ಎಂದರು.

ಪ್ರವೀಣ್ ಕೊಲೆಯ ಹಿಂದಿನ ಶಕ್ತಿ ಯಾವುದು? ಫೈನಾನ್ಸ್ ಮಾಡಿದವರು ಯಾರು? ಕುಮ್ಮಕ್ಕು ಕೊಟ್ಟವರು ಯಾರು ಆಶ್ರಯ ಕೊಟ್ಟವರು ಯಾರು? ಎಲ್ಲಾ ವಿಚಾರವನ್ನು ಎನ್ ಐ ಎ ತನಿಖೆ ಮಾಡುತ್ತದೆ.ಕೇವಲ ಕೊಲೆ ಆರೋಪಿಗಳಲ್ಲ ಎಲ್ಲರ ಹಿಂದೆ ಬಿದ್ದಿದೆ ಎನ್ ಐ ಎ. ಮುಂದೆ ಇಂತಹ ಘಟನೆಯಾಗದಂತೆ ಭಯ ಹುಟ್ಟಿಸಬೇಕು.ಯಾವುದೇ ಎರಡು ತೊಡರು ಬಂದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಕೇಂದ್ರ ಗೃಹ ಸಚಿವರಲ್ಲಿ ಕೇಳಿದ್ದೇನೆ ನನ್ನ ಬೇಡಿಕೆಗೆ ಗೃಹ ಸಚಿವ ಅಮಿತ್ ಶಾ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಪರೇಶ್ ಮೇಸ್ತಾ ಆರೋಪಿಗಳಿಗೆ ಬಿಜೆಪಿ ಮಣೆ!

ಪರೇಶ್ ಮೇಸ್ತಾ ಆರೋಪಿಗಳಿಗೆ ಬಿಜೆಪಿ ಮಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,  ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ನೋಡಿದ್ದೇನೆ. ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಸರ್ಕಾರ ಗಮನ ಹರಿಸಿ ಕ್ರಮ ಜರುಗಿಸಬೇಕು. ಪರೇಶ್ ಮೇಸ್ತನ ಸಾವಿನ ಹಿನ್ನೆಲೆಯಲ್ಲಿ ನಾವೆಲ್ಲರೂ ಹೋರಾಟ ಮಾಡಿದ್ದೇವೆ. ಪರೇಶ್ ಮೇಸ್ತ ಕುಟುಂಬ ಮತ್ತು ನಮ್ಮ ವಿಚಾರಧಾರೆಗೆ ಘಾಸಿಯಾಗುವ ಬೆಳವಣಿಗೆ ನಡೆಯಬಾರದು. ತಪ್ಪಾಗಿದ್ದರೆ ಅದು ಸರಿಪಡಿಸಬೇಕು ಮತ್ತು ತನಿಖೆಯಾಗಬೇಕು ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ