28 ಬಾರಿ ಚಿನ್ನದ ಪದಕ ಗೆದ್ದ ಕ್ರೀಡಾಪಟು, ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ
24/06/2021
ಡೆಹ್ರಾಡೂನ್: 28 ಬಾರಿ ಚಿನ್ನದ ಪದಕ ಗೆದ್ದಿರುವ ಅಪೂರ್ವ ಪ್ರತಿಭಾನ್ವಿತೆ, ದೇಶದ ಮೊದಲ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಇದೀಗ ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡುತ್ತಾ, ಜೀವನ ಸಾಗಿಸುವಂತಾಗಿದೆ. ಇದಲ್ಲವೇ ನಮ್ಮ ದೇಶದ ದುಸ್ಥಿತಿ ಎಂದು ಪ್ರಶ್ನಿಸುವಂತಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಖ್ಯಾತಿ ತಂದಿರುವ ದಿಲ್ರಾಜ್ ಕೌರ್ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ರಸ್ತೆ ಬದಿಯಲ್ಲಿ ಚಿಪ್ಸ್ ಮತ್ತು ಬಿಸ್ಕೇಟ್ ಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ.
‘ನಾನು ಸಾಕಷ್ಟು ಬಾರಿ ಸರ್ಕಾರವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.
2004ರಲ್ಲಿ ಶೂಟಿಂಗ್ ಪ್ರಾರಂಭಿಸಿದ್ದೆ. ರಾಷ್ಟ್ರಮಟ್ಟದಲ್ಲಿ 28 ಚಿನ್ನ, 8 ಬೆಳ್ಳಿ ಮತ್ತು 3 ಕಂಚಿನ ಪದಕ ಗೆದ್ದಿದ್ದೇನೆ. ಅಂತಾರಾಷ್ಟ್ರೀಯ ಆಟಗಳಲ್ಲಿಯೂ ಭಾಗವಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ.