ರಸ್ತೆ ಬದಿಯಲ್ಲಿ ಯುವತಿಯ ಅಂಗಾಂಗ ಸ್ಪರ್ಶಿಸಿದ ಯುವಕ | ಅಟ್ಟಾಡಿಸಿ ಹೊಡೆದ ಯುವತಿ
ನವದೆಹಲಿ: ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ಆಕೆಗೆ ಕಿರುಕುಳ ನೀಡಿದ್ದು, ಈ ವೇಳೆ ಕೋಪಗೊಂಡ ಮಹಿಳೆ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ನೋಯ್ಡಾ ಸೆಕ್ಟರ್-12ರ ಪೆಟ್ರೋಲ್ ಪಂಪ್ನಲ್ಲಿ ಕೆಲಸ ಮಾಡುವ 24 ವರ್ಷ ವಯಸ್ಸಿನ ಮಹಿಳೆ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಯುವಕನೋರ್ವ ಬೈಕ್ ನಲ್ಲಿ ಬಂದಿದ್ದು, ಯುವತಿಯನ್ನು ಫಾಲೋ ಮಾಡಲು ಆರಂಭಿಸಿದ್ದಾನೆ. ನಿರ್ಜನ ಪ್ರದೇಶವೊಂದು ಸಿಕ್ಕಿದ ತಕ್ಷಣವೇ ಬೈಕ್ ನಿಲ್ಲಿಸಿ. ಯುವತಿಯ ಮೇಲೆ ಎರಗಿದ್ದು, ಯುವತಿಯ ಅಂಗಾಂಗ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ.
ಏಕಾಏಕಿ ನಡೆದ ಘಟನೆಯಿಂದ ಗೊಂದಲಕ್ಕೀಡಾಗಿದ್ದ ಯುವತಿ ಎಚ್ಚೆತ್ತುಕೊಂಡ ವೇಳೆ ಸಾರ್ವಜನಿಕರು ಈ ಪ್ರದೇಶಕ್ಕೆ ಆಗಮಿಸಿದ್ದಾರೆ. ಈ ವೇಳೆ ಯುವಕ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಯುವತಿ ಆತನನ್ನು ಹಿಡಿದು ಎಳೆದು ನೆಲಕ್ಕೆ ಅಪ್ಪಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ವೇಳೇ ಆತನೂ ಮಹಿಳೆಗೆ ಥಳಿಸಲು ಯತ್ನಿಸಿದ್ದಾನೆ. ಆದರೆ ಯುವತಿಯು ಅದಕ್ಕೆ ಅವಕಾಶವೇ ನೀಡದೇ ತಕ್ಕಶಾಸ್ತಿ ಮಾಡಿದ್ದಾಳೆ.
ಯುವತಿಯೊಬ್ಬಳು ಈ ರೀತಿಯಾಗಿ ಯುವಕನಿಗೆ ಹೊಡೆಯುತ್ತಿದ್ದಾಳೆ. ಇಲ್ಲಿ ಏನು ನಡೆದಿದೆ ಎನ್ನುವುದನ್ನು ತಿಳಿದು ಪೊಲೀಸರನ್ನು ಕರೆಯುವ ಬದಲು ಸಾರ್ವಜನಿಕರು ತಮ್ಮ ಮೊಬೈಲ್ ತೆಗೆದು ಇವರ ಫೈಟ್ ನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಇನ್ನೂ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿ, ನಾನು ಕಳೆದ 6 ವರ್ಷಗಳಿಂದ ೀ ಪ್ರದೇಶದಲ್ಲಿ ವಾಸವಿದ್ದೇನೆ. ಇಲ್ಲಿಯವರೆಗೆ ನನಗೆ ಇಂತಹ ಅನುಭವ ಆಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನಾನು ಅಸುರಕ್ಷಿತಳು ಎಂದು ಅನ್ನಿಸಿತು ಎಂದು ಹೇಳಿದ್ದಾಳೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ತನಿಖೆ ನಡೆಸುವುದಾಗಿ ಯುವತಿಗೆ ಪೊಲೀಸರು ತಿಳಿಸಿದ್ದಾರೆ.