ನಮ್ಮ ಹೋರಾಟಗಳಿಗೆ ಸಂಗೊಳ್ಳಿ ರಾಯಣ್ಣನೇ ಸ್ಪೂರ್ತಿ: ಡಿ.ಕೆ.ಶಿವಕುಮಾರ್
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 226 ನೇ ಜಯಂತ್ಯೋತ್ಸವದ ಅಂಗವಾಗಿ ಬೆಂಗಳೂರು ಮೆಜೆಸ್ಟಿಕ್ ನ ದೇವರಾಜ ಅರಸು ವೃತ್ತದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ ಅವರ ಹೋರಾಟಕ್ಕೆ ಮತ್ತೊಮ್ಮೆ ಶಕ್ತಿ ತುಂಬಲು ನಾವೆಲ್ಲ ಹೊರಟಿದ್ದೇವೆ. ನಮ್ಮ ಹೋರಾಟಗಳಿಗೆ ರಾಯಣ್ಣನೇ ಸ್ಪೂರ್ತಿ.ಈ ದೇಶದಲ್ಲಿ ಪ್ರಜಾಪ್ರಭುತ್ವ ಸುಮ್ಮನೆ ಬಂದಿಲ್ಲ. ರಾಯಣ್ಣನಂತವರ ತ್ಯಾಗ, ಬಲಿದಾನದಿಂದ ದೊರಕಿದೆ. ಇದನ್ನು ಕಾಪಾಡಬೇಕು ಎಂದರು.
ಕಳೆದ ವರ್ಷ ಇದೇ ರೈಲು ನಿಲ್ದಾಣದ ಬಳಿ ಇರುವ ರಾಯಣ್ಣ ಅವರ ಪ್ರತಿಮೆಯ ಬಳಿಯಿಂದಲೇ ಸುಮಾರು 3 ಲಕ್ಷ ಜನ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡಿದ್ದೇವು. ಇಡೀ ಕರ್ನಾಟಕದ ಇತಿಹಾಸದಲ್ಲಿ ಇದೊಂದು ಅಚ್ಚಳಿಯದ ಕಾರ್ಯಕ್ರಮ. ಈ ಕಾರ್ಯಕ್ರಮ ರಾಜ್ಯದಲ್ಲಿ ಹೊಸ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯಿತು.ಈ ದೇಶದಿಂದ ಕೋಮುವಾದಿಗಳನ್ನು ಹೊಡೆದೊಡಿಸುವ ಕಾಲ ಹತ್ತಿರ ಬಂದಿದೆ.
ಈ ಬದಲಾವಣೆ ಕರ್ನಾಟಕದಿಂದಲೇ ಆರಂಭಗೊಂಡಿದೆ, ಮತ್ತೊಮ್ಮೆ ಈ ದೇಶದಲ್ಲಿ ಗಾಂಧಿ ಅವರ ಆಶಯಗಳನ್ನು ಬಿತ್ತೋಣ, ಯುವಕರು ರಾಯಣ್ಣನಂತೆ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೇಳುತ್ತಾ ಇದ್ದೆ, ಈ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷವಾಗಿದೆ. ನಿಮಗೂ 76 ತುಂಬಿ 77 ಕ್ಕೆ ಬೀಳುತ್ತಿದೆ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದು ಸಲಹೆ ನೀಡಿದೆ ಎಂದರು.ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ,ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.