ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಬರ್ಬರ ಹತ್ಯೆ!
ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ಛಲವಾದಿಪಾಳ್ಯದ ಫವರ್ ಗಾರ್ಡನ್ ನಲ್ಲಿ ನಡೆದಿದೆ.
ಮನೆಯಲ್ಲಿದ್ದ ರೇಖಾ ಕದಿರೇಶ್ ಅವರನ್ನು ಹೊರಬರುವಂತೆ ಕರೆದ ದುಷ್ಕರ್ಮಿಗಳು ಬಳಿಕ ಮಾರಕಾಸ್ತ್ರಗಳಿಂದ ಅವರ ಮೇಲೆ ದಾಳಿ ನಡೆಸಿದ್ದಾರೆ. ರಕ್ತದ ಮಡುವಲ್ಲಿ ಬಿದ್ದಿದ್ದ ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಛಲವಾದಿಪಾಳ್ಯದ ಫವರ್ ಗಾರ್ಡನ್ ನಲ್ಲಿ ಈ ಘಟನೆ ನಡೆದಿದ್ದು, 2018ರ ಫೆಬ್ರವರಿ 8ರಂದು ರೇಖಾ ಪತಿ ಕದಿರೇಶ್ ಅವರನ್ನು ಮಲ್ಲೇಶ್ವರಂ ನ ದೇವಸ್ಥಾನದ ಬಳಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಶೋಬನ್ ಗ್ಯಾಂಗ್, ಕದಿರೇಶ್ ಅವರನ್ನು ಕೊಚ್ಚಿ ಕೊಲೆಗೈದಿತ್ತು. ಇದೀಗ ಅದೇ ಗ್ಯಾಂಗ್ ರೇಖಾ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವ ಶಂಕೆಯಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.