ರೇಖಾ ಕದಿರೇಶ್ ಹತ್ಯೆಗೂ ಮುನ್ನ ಸಿಸಿ ಕ್ಯಾಮರ ತಿರುಗಿಸಿಟ್ಟ ದುಷ್ಕರ್ಮಿಗಳು | ಘಟನಾ ಸ್ಥಳದಲ್ಲಿ ಏನು ನಡೆದಿತ್ತು ಗೊತ್ತಾ?
ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ಪಕ್ಕಾ ಪ್ಲಾನ್ ಮಾಡಿ ಹತ್ಯೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಕೊಲೆಗೂ ಮೊದಲೇ ಆರೋಪಿಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ನಗರದ ಛಲವಾದಿಪಾಳ್ಯದ ಬಿಜೆಪಿ ಕಚೇರಿ ಎದುರು ರೇಖಾ ಅವರನ್ನು ಹತ್ಯೆ ಮಾಡಲಾಗಿದೆ. ಕೃತ್ಯಕ್ಕೂ ಮೊದಲು ಈ ಪ್ರದೇಶದ ಸುತ್ತಮುತ್ತಲಿನ ಸಿಸಿ ಕ್ಯಾಮರಗಳನ್ನು ಬೇರೆಡೆಗೆ ತಿರುಗಿಸಿಡಲಾಗಿದೆ. ಸುಮಾರು 7ಕ್ಕೂ ಹೆಚ್ಚು ಸಿಸಿ ಕ್ಯಾಮರಗಳನ್ನು ತಿರುಗಿಸಿಡಲಾಗಿದ್ದು, ಆರೋಪಿಗಳ ಕೃತ್ಯದ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಗದಂತೆ ಮೊದಲೇ ಪ್ಲಾನ್ ಮಾಡಿದ್ದರು ಎಂದು ಹೇಳಲಾಗಿದೆ.
ಅಂಜನಪ್ಪ ಗಾರ್ಡನ್ ಬಳಿ ಇದ್ದ ಬಿಜೆಪಿ ಕಚೇರಿಯಲ್ಲಿ ಬಡವರಿಗೆ ಫುಡ್ ಕಿಟ್ ವಿತರಿಸಲು ರೇಖಾ ಆಗಮಿಸಿದ್ದರು. ಫುಡ್ ಕಿಟ್ ವಿತರಣೆಯ ಪಟ್ಟಿ ಸಿದ್ಧಪಡಿಸಿ ಕಚೇರಿಯಿಂದ ಹೊರ ಬಂದು ಜನರನ್ನು ಕರೆಯಲು ಮುಂದಾಗುತ್ತಿದ್ದಂತೆಯೇ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳು ಮಾರಕಾಸ್ತ್ರದೊಂದಿಗೆ ಬರುತ್ತಿರುವುದನ್ನು ಕಂಡು ರೇಖಾ ಅವರು ಕಚೇರಿಯೊಳಗೆ ಓಡಿಹೋಗಲು ಯತ್ನಿಸಿದ್ದಾರೆ. ಆದರೆ ಅವರ ಕತ್ತು, ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಡ್ರ್ಯಾಗರ್ ನಿಂದ ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.