ಬಜಾಲ್ ಜಲ್ಲಿಗುಡ್ಡೆ ಪ್ರದೇಶದಲ್ಲಿ ಪ್ರತ್ಯೇಕ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಥಾಪಿಸಲು ಮನವಿ

ಮಂಗಳೂರು: ಬಜಾಲ್ ಜಲ್ಲಿಗುಡ್ಡೆ (ಜಾರಬಳಿ) ಪ್ರದೇಶದಲ್ಲಿ ಪ್ರತ್ಯೇಕ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಥಾಪಿಸಲು, ಕಟ್ಟಪುನಿ ಅಂಗನವಾಡಿ ಬಳಿ ಹಾದು ಹೋಗಿರುವ ಅಪಾಯಕಾರಿ ಸರ್ವಿಸ್ ವಿದ್ಯುತ್ ತಂತಿ ತೆರವುಗೊಳಿಸಲು ಒತ್ತಾಯಿಸಿ ಇಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜನೀಯರ್ ಸತೀಶ್ ಅವರಿಗೆ ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಮಂಗಳೂರಿನ ಅಳಪೆ ದಕ್ಷಿಣ ವಾರ್ಡಿನ ಪಕ್ಕಲಡ್ಕ ಬಸ್ ನಿಲ್ದಾಣದಿಂದ ಹಿಡಿದು ಬಜಾಲ್ ವಾರ್ಡಿನ ಜಾರ ಬಳಿ ಪ್ರದೇಶದವರೆಗೂ ನೂರಾರು ಮನೆಗಳಿವೆ. ಈ ಎಲ್ಲಾ ಮನೆಗಳಿಗೆ ಸಂಪರ್ಕಿಸುವ ವಿದ್ಯುತ್ ಜಾಲವನ್ನು ನಿಯಂತ್ರಿಸಲು ಮಾತ್ರ ಒಂದೇ ಒಂದು ಟ್ರಾನ್ಸ್ ಫಾರ್ಮರ್ ಇದ್ದು, ಅದು ವಿಪರೀತವಾದ ಒತ್ತಡವನ್ನು ನಿಯಂತ್ರಿಸುತ್ತಿದೆ. ಈಗಾಗಲೇ ಈ ಪರಿಸರದಲ್ಲಿ ಬಹುತೇಕ ಮನೆಗಳು ನಿರ್ಮಾಣವಾಗಿದ್ದು ಮತ್ತಷ್ಟು ಹೊಸ ಹೊಸ ಮನೆಗಳು ನಿರ್ಮಾಣ ಹಂತದಲ್ಲಿವೆ. ಅದರಂತೆ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆಗಳು ಕೂಡಾ ಏರಿಕೆಯಾಗ ತೊಡಗಿದೆ.
ಈ ಭಾಗದಲ್ಲಿ ನಿರ್ಮಾಣಗೊಂಡಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಬಳಕೆಯಲ್ಲಿ ಗಣನೀಯ ಏರಿಕೆಯಿಂದ ವಿದ್ಯುತ್ ಜಾಲದ ಮೇಲೆ ಒತ್ತಡ ನಿರ್ಮಾಣಗೊಂಡಿದೆ. ಅದರ ಪರಿಣಾಮವಾಗಿ ಪಕ್ಕಲಡ್ಕ ಬಸ್ ನಿಲ್ದಾಣದಲ್ಲಿ ಇರುವ ಏಕೈಕ ಟ್ರಾನ್ಸ್ ಫಾರ್ಮರ್ ಗೆ ಓವರ್ ಲೋಡ್ ಸೃಷ್ಟಿಯಾಗಿದ್ದು, ಆಗಾಗ್ಗೆ ವಿದ್ಯುತ್ ಕಡಿತ ಮತ್ತು ಟ್ರಾನ್ಸ್ ಫಾರ್ಮರ್ ವೈಫಲ್ಯಗಳು ಉಂಟಾಗುತ್ತಿದೆ. ಮೊನ್ನೆ ಸುರಿದ ಗಾಳಿ ಮಳೆಗೆ ಜಲ್ಲಿಗುಡ್ಡೆ ( ಜಾರ ಬಳಿ)ಸುತ್ತಮುತ್ತಲ ಭಾಗದಲ್ಲಿ ದಿನವಿಡೀ ಕರೆಂಟು ಇಲ್ಲದೆ ಈ ಭಾಗದ ಜನ ಹಲವು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಒಂದು ದಿನ ಸುರಿದ ಗಾಳಿ ಮಳೆಗೆ ಈ ರೀತಿಯ ತೊಂದರೆಯನ್ನು ಅನುಭವಿಸಿರುವ ನಿವಾಸಿಗಳು ಇನ್ನು ಮಳೆಗಾಲದಲ್ಲಿ ಯಾವ ರೀತಿಯ ಸಮಸ್ಯೆ ಸೃಷ್ಟಿಯಾಗಲಿವೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.
ಮಾತ್ರವಲ್ಲದೆ ಕಟ್ಟಪುನಿ ಅಂಗನವಾಡಿ ಕೇಂದ್ರದಲ್ಲೂ ವಿದ್ಯುತ್ ಸರ್ವೀಸ್ ತಂತಿಗಳು ಈ ಅಂಗನವಾಡಿಗೆ ತೆರಳುವ ಮಕ್ಕಳಿಗೆ ಕೈಗೆಟಕುವ ರೀತಿಯಲ್ಲಿ ಹಾದು ಹೋಗಿರುತ್ತದೆ. ಒಂದು ಮಕ್ಕಳು ಇದರಲ್ಲಿ ನೇತಾಡಿದರೆ ಜೀವಕ್ಕೆ ಅಪಾಯ ಸಂಭವಿಸುವ ಪರಿಸ್ಥಿತಿ ಇದ್ದು ಈ ತಂತಿಯನ್ನು ಕೂಡಲೇ ತೆರವುಗೊಳಿಸಿ ಕೈಗೆಟುಕದ ರೀತಿಯಲ್ಲಿ ಅಳವಡಿಸಲು ಮೆಸ್ಕಾಂ ಇಲಾಖೆ ಮುಂದಾಗಬೇಕು.
ಈ ಎಲ್ಲಾ ಹಿನ್ನಲೆಯಲ್ಲಿ ಬಜಾಲ್ ಪರಿಸರದ ಜನರು ಸಣ್ಣ ಮಳೆಗೂ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯುತ್ ಜಾಲದಲ್ಲಿ ಪಕ್ಕಲಡ್ಕ ಬಸ್ ನಿಲ್ದಾಣದ ಬಳಿಯ ಟ್ರಾನ್ಸ್ ಫಾರ್ಮರ್ ಗೆ ಅತಿಯಾದ ಒತ್ತಡ ನಿರ್ಮಾಣವಾಗಿರುವುದರಿಂದ ಬಜಾಲ್ ಜಲ್ಲಿಗುಡ್ಡೆ ಜಾರ ಬಳಿ ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ವೊಂದನ್ನು ಸ್ಥಾಪಿಸಲು, ಹಾಗೂ ಕಟ್ಡಪುನಿ ಅಂಗನವಾಡಿ ಬಳಿ ಕೈಗೆಟಕುವ ರೀತಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯು ಮೆಸ್ಕಾಂ ಇಲಾಖೆ ಮತ್ತದರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ನಿಯೋಗದಲ್ಲಿ ಡಿವೈಎಫ್ಐ ಮುಖಂಡ, ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್, ಅಧ್ಯಕ್ಷರಾದ ಅಯಾಜ್ ಜಲ್ಲಿಗುಡ್ಡೆ, ಕೋಶಾಧಿಕಾರಿ ಕಮಲಾಕ್ಷ ಬಜಾಲ್, ದೀಪಕ್ ಬಜಾಲ್, ಜಯಪ್ರಕಾಶ್ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD