ಕೊಳೆತ ಕಸದ ರಾಶಿಯಲ್ಲಿದ್ದ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ನಿವೃತ್ತ ಎಲ್ ಐಸಿ ಆಫೀಸರ್ ನ ರಕ್ಷಣೆ
ಉಡುಪಿ: ನಗರದ ಬೈಲೂರು ಎನ್ ಜಿಓ ಕಾಲನಿಯಲ್ಲಿ ಕೊಳೆತ ಕಸದ ರಾಶಿಯಲ್ಲಿ ಮಲಮೂತ್ರ ಹುಳಗಳ ನಡುವೆ ಇದ್ದ ಅಸ್ವಸ್ಥ ವೃದ್ಧರನ್ನು ವಿಶು ಶೆಟ್ಟಿ ರಕ್ಷಿಸಿ ತನ್ನ ವಾಹನದಲ್ಲಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ವೃದ್ಧರು ರಂಜನ್ (66 ವರ್ಷ) ಒಂಟಿಯಾಗಿ ಜೀವಿಸುತ್ತಿದ್ದು ನಿವೃತ್ತ ಎಲ್ ಐಸಿ ಆಫೀಸರ್ ಆಗಿದ್ದವರು. ಮನೆಯ ಎಲ್ಲಾ ಕೋಣೆಗಳು ಕೊಳೆತ ಕಸಗಳು ಮಲಮೂತ್ರದೊಂದಿಗೆ ಹುಳಗಳು ಕೂಡ ಆಗಿದ್ದವು. ವೃದ್ಧರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅನಾರೋಗ್ಯದಲ್ಲಿದ್ದು ತೀವ್ರ ರಕ್ತದೊತ್ತಡದಿಂದ ಬಳಲುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಅನ್ನ ಆಹಾರವಿಲ್ಲದೆ ಬದುಕುತ್ತಿದ್ದು ಅನಾಗರಿಕ ಬದುಕು ಅವರದಾಗಿತ್ತು. ವೃದ್ಧರಿಗೆ ಹೆಂಡತಿ ಮಕ್ಕಳಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಮನೆಯ ಸುತ್ತಮುತ್ತ ದುರ್ವಾಸನೆಯಿಂದ ಕೂಡಿದ್ದು ಪ್ರತಿಷ್ಠಿತ ಕಾಲನಿಯ ಈ ವೃದ್ಧರ ಬದುಕು ಇಲಾಖೆಯ ಗಮನಕ್ಕೆ ಬಾರದಿರುವುದು ಅಚ್ಚರಿಯಾಗಿದೆ.
ರಕ್ಷಣೆ ಸಮಯದಲ್ಲಿ ವೃದ್ದರು ಸಿಗರೇಟ್ ಹಚ್ಚಲು ಲೈಟರ್ ಹಚ್ಚಲು ಪ್ರಯತ್ನಿಸುತ್ತಿದ್ದರು. ಲೈಟರ್ ಉರಿದಲ್ಲಿ ಕಸದ ರಾಶಿಗೆ ಬೆಂಕಿ ಹಿಡಿದು ದುರಂತ ಆಗುತ್ತಿತ್ತು. ದುರಂತ ತಪ್ಪಿದೆ. ಆಸ್ಪತ್ರೆಯಲ್ಲಿ ವೈದ್ಯರು ವೃದ್ಧರ ಸ್ಥಿತಿ ಚಿಂತಾಜನಕವಾಗಿದ್ದು ಅಂಗಾಂಗಗಳ ವೈಫಲ್ಯತೆ ಆಗಿದೆ ಎಂದು ಸೂಚಿಸಿದ್ದಾರೆ. ಹಿರಿಯ ನಾಗರಿಕ ಸಹಾಯವಾಣಿ ಹಾಗೂ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರು ಬಾಳಿಗಾ ಆಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.