ಈಶಾನ್ಯ ರಾಜ್ಯಗಳ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಕುಯಿಲಾಡಿ ಸುರೇಶ್ ನಾಯಕ್
ಈಶಾನ್ಯ ರಾಜ್ಯಗಳ ಚುನಾವಣೆಯ ಪಲಿತಾಂಶ ಬಿಜೆಪಿಗೆ ಹೊಸ ಚೈತನ್ಯ ತುಂಬಿದೆ. ತ್ರಿಪುರ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮಗದೊಮ್ಮೆ ಸರಕಾರ ರಚಿಸಲಿದೆ. ಮೇಘಾಲಯದಲ್ಲೂ ಪಕ್ಷದ ಶಕ್ತಿ ಹೆಚ್ಚಿದೆ. ಈ ಚುನಾವಣಾ ಫಲಿತಾಂಶ ಕರ್ನಾಟಕದ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಗಳಿಸಿದ ಪ್ರಯುಕ್ತ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಸಂಭ್ರಮಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಮರೀಚಿಕೆಯಾಗಿದ್ದ ಈ 7 ರಾಜ್ಯಗಳು ಕಾಂಗ್ರೆಸ್ ನಿಂದ ದೂರ ಉಳಿದ ಪರಿಣಾಮವಾಗಿ, ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಆ ರಾಜ್ಯಗಳಲ್ಲಿ ರೈಲ್ವೆ, ವಿಮಾನ ಯಾನದಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಾಧ್ಯವಾಗಿದೆ. ಇದರ ಫಲವಾಗಿ ಬಂದಿರುವ ಉತ್ತಮ ಫಲಿತಾಂಶ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದರು.
ಅಭಿವೃದ್ಧಿಯೇ ಬಿಜೆಪಿಯ ಮೂಲ ಮಂತ್ರವಾಗಿದೆ. ಕೇಂದ್ರದ ಸಹಯೋಗದೊಂದಿಗೆ ರಾಜ್ಯದ ಡಬಲ್ ಇಂಜಿನ್ ಸರಕಾರ ರಾಜ್ಯದಲ್ಲಿ ವಿಮಾನ ನಿಲ್ದಾಣ, ರೈಲ್ವೆ ಸೇವೆ, ಶುದ್ಧ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ ಸಹಿತ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬದ್ಧತೆ ಮೆರೆದು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಸದಾ ಹುರುಳಿಲ್ಲದ ಅಪಪ್ರಚಾರದಲ್ಲಿ ತೊಡಗಿದೆ. ಜನತೆಯ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ಸಿನ ಸಭೆಗಳಿಗೆ 500 ರೂಪಾಯಿ ಕೊಟ್ಟು ಜನರನ್ನು ಕರೆ ತರುವ ಪರಿಸ್ಥಿತಿಯನ್ನು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಮಾತಿನ ಮೂಲಕ ದೃಢೀಕರಿಸಿರುವುದು ಕಾಂಗ್ರೆಸ್ಸಿನ ಅಧ:ಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಾಗ ನೈಜ ಸ್ಥಿತಿ ಸಾಬೀತಾಗಿ, ಕಾಂಗ್ರೆಸ್ಸಿನ ಅಧಿಕಾರ ಹಿಡಿಯುವ ಹಗಲು ಕನಸು ಭಗ್ನಗೊಳ್ಳಲಿದೆ. ಕಾಂಗ್ರೆಸ್ ಕನಿಷ್ಠ 75 ಸ್ಥಾನ ಗಳಿಸಲೂ ಸಾಧ್ಯವಿಲ್ಲ.
ವಿಧಾನಸಭಾ ಚುನಾವಣಾ ಪೂರ್ವಸಿದ್ಧತೆಗಾಗಿ ನಡೆದ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ ಮುಂತಾದ ಕಾರ್ಯ ಚಟುವಟಿಕೆಗಳಿಂದ ಜನತೆಯ ನಾಡಿಮಿಡಿತ ರುಜುವಾತಾಗಿದೆ. ಮಗದೊಮ್ಮೆ ರಾಜ್ಯದ ಜನತೆ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಐದೂ ಸ್ಥಾನಗಳ ಗೆಲುವಿನ ಜೊತೆಗೆ ಪೂರ್ಣ ಬಹುಮತದ ಬಿಜೆಪಿ ನೇತೃತ್ವದ ಸರಕಾರ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಕುಯಿಲಾಡಿ ಹೇಳಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ದೊರೆತ ಅಭೂತಪೂರ್ವ ಗೆಲುವು ಅಭಿವೃದ್ಧಿ ಪರ ದೊರೆತ ಗೆಲುವು, ಪಕ್ಷದ ಕಾರ್ಯಕರ್ತರಿಗೆ ದೊರೆತ ವಿಜಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅಭಿವೃದ್ಧಿಯ ನಾಗಾಲೋಟವನ್ನು ಸಹಿಸದ ಕಾಂಗ್ರೆಸ್ ಯಾವುದೇ ಅಭಿವೃದ್ಧಿಯ ವಿಚಾರಗಳಿಲ್ಲದೆ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಇತರ ರಾಜ್ಯಗಳಲ್ಲಿ ಈ ಹಿಂದೆ ನೀಡಿರುವ ಭರವಸೆಗಳನ್ನೇ ಈಡೇರಿಸದ ಕಾಂಗ್ರೆಸ್, ವಿರೋಧ ಪಕ್ಷದ ಸ್ಥಾನಕ್ಕೂ ಹೆಣಗಾಡುವ ಸ್ಥಿತಿಯಲ್ಲಿದ್ದು, ಭರವಸೆಯ ಗ್ಯಾರಂಟಿ ಕಾರ್ಡ್ ವಿತರಿಸುವುದು ಹಾಸ್ಯಾಸ್ಪದವಾಗಿದೆ. ಜನತೆ ಪ್ರಬುದ್ಧರಾಗಿದ್ದು ಕಾಂಗ್ರೆಸ್ಸಿನ ಸುಳ್ಳಿನ ಜಾಲಕ್ಕೆ ಮರುಳಾಗದೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆ ಸಹಿತ ರಾಜ್ಯದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಕೈ ಜೋಡಿಸಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ.ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಪ್ರಧಾನ ಕಾರ್ಯದರ್ಶಿ ಅಲ್ವಿನ್ ಡಿಸೋಜ, ಪ್ರಮುಖರಾದ ಶ್ಯಾಮಲಾ ಎಸ್. ಕುಂದರ್, ದಿನಕರ ಶೆಟ್ಟಿ ಹೆರ್ಗ, ವಿಜಯ ಕೊಡವೂರು, ವೆಂಕಟರಮಣ ಕಿದಿಯೂರು, ಸುಂದರ್ ಜೆ. ಕಲ್ಮಾಡಿ, ಚಂದ್ರಶೇಖರ ಪ್ರಭು, ಕೃಷ್ಣಪ್ಪ ಜತ್ತನ್, ದುರ್ಗಾದಾಸ್, ದಯಾಶಿನಿ, ಸುಜಾಲ ಸತೀಶ್, ಸುಧಾ ಪೈ, ಶಕುಂತಳಾ ಶೆಟ್ಟಿ, ಕಾವೇರಿ, ಶಾಂತಿ, ಶೈಲಜಾ ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw