ಮಾಣಿಯಿಂದ ಬಿ.ಸಿ.ರೋಡ್ ವರೆಗಿನ ರಸ್ತೆ: ಯಾವ ತಪ್ಪಿಗೆ ಜನರಿಗೆ ಈ ಶಿಕ್ಷೆ?
ಮಾಣಿಯಿಂದ ಬಿ.ಸಿ.ರೋಡ್ ವರೆಗಿನ ರಸ್ತೆಯ ಅವ್ಯವಸ್ಥೆ, ಯಾವ ತಪ್ಪಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಈ ಶಿಕ್ಷೆ ಅಂತ ಪ್ರಶ್ನಿಸುವಂತೆ ಮಾಡುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಯನ್ನು ಅಗೆದಿದ್ದಾರೆ. ಆದರೆ, ಪರ್ಯಾಯವಾಗಿ ರಸ್ತೆ ನಿರ್ಮಾಣ ಮಾಡದೇ ಮಣ್ಣಿನಲ್ಲೇ ವಾಹನಗಳು ಸಂಚರಿಸುವ ಸ್ಥಿತಿ ಬಂದೊದಗಿದೆ.
ಈ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷಗಳು ಕಳೆಯುತ್ತಲೇ ಇದೆ. ಆದರೆ ಇಲ್ಲಿನ ಜನರು ಈ ರಸ್ತೆಯಲ್ಲಿ ತೆವಲಿಕೊಂಡು ಹೋಗುವುದು ಇಂದಿಗೂ ತಪ್ಪಿಲ್ಲ. ಕಾರು., ದ್ವಿಚಕ್ರವಾಹನಗಳು ಈ ರಸ್ತೆಯಲ್ಲಿ ಹೋಗಲು ಸಾಧ್ಯವಾಗದೇ ಪರದಾಡುತ್ತಾ ಸಂಚರಿಸಬೇಕಿದೆ. ಮಳೆ ಬಂದಂತೂ ರಸ್ತೆ ಯಾವುದು ಹೊಂಡ ಗುಂಡಿಗಳು ಯಾವುದು ಎನ್ನುವುದೂ ತಿಳಿದಂತಾಗುತ್ತದೆ.
ರಸ್ತೆ ಕಾಮಗಾರಿ ವೇಳೆ ಇದೆಲ್ಲ ಸಹಜ ಅಂತ ವಾದಿಸುವವರೂ ಇರಬಹುದು. ಆದರೆ, ಯಾವುದೇ ಕಾಮಗಾರಿ ನಡೆಸಬೇಕಾದರೂ, ಕಾಮಗಾರಿ ಮುಗಿಯುವವರೆಗೂ ಸಾರ್ವಜನಿಕರು ಸಂಚರಿಸಲು ಪರ್ಯಾಯ ರಸ್ತೆ ಮಾಡಿಕೊಡಬೇಕಿರುವುದು ಕಾಮಗಾರಿ ಕೈಗೊಂಡಿರುವ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಆದರೆ ಕಾಮಗಾರಿ ನಡೆಸುತ್ತಿರುವವರು ಕೇವಲ ಹೆಸರಿಗಷ್ಟೇ ಜೆಸಿಬಿಗಳಲ್ಲಿ ಮಣ್ಣು ಸಮತಟ್ಟು ಮಾಡಿ ಇದೇ ನಿಮ್ಮ ರಸ್ತೆ ಬೇಕಾದರೆ ಹೋಗಿ ಎಂಬಂತೆ ವರ್ತಿಸುತ್ತಿರುವಂತಿದೆ.
ಸರಿಯಿದ್ದ ರಸ್ತೆಯನ್ನು ಅಗೆದು ಹೊಸ ರಸ್ತೆ ಮಾಡುತ್ತಿದ್ದಾರೆ. ಈ ರಸ್ತೆ ಅಭಿವೃದ್ಧಿಯಾದ ತಕ್ಷಣ ಟೋಲ್ ಗೇಟ್ ಕೂಡ ನಿರ್ಮಾಣವಾಗಬಹುದು. ಯಾವುದೋ ಸಂಸ್ಥೆ ದುಡ್ಡು ಮಾಡಲು ಜನರು ಹೊಂಡಗುಂಡಿಗಳಲ್ಲಿ ಸಂಚರಿಸಬೇಕಾದ ದುಸ್ಥಿತಿಯಲ್ಲಿ ಸಿಲುಕಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಮಳೆ ಬಂದರೆ ಈ ರಸ್ತೆಯಲ್ಲಿ ಕೆಸರು ಮಣ್ಣು ಎದ್ದು ದ್ವಿಚಕ್ರವಾಹನ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಭಾರೀ ವಾಹನಗಳು ಕೂಡ ಈ ರಸ್ತೆಗಳಲ್ಲಿ ಹೋಗಲು ಕಷ್ಟಪಡುವಂತಾಗಿದೆ. ಸರಿಯಾದ ರಸ್ತೆ ಮಾಡಿಕೊಡದೇ ಈ ರೀತಿಯಾಗಿ ಕಾಮಗಾರಿ ನಡೆಸುವುದು ಕಾನೂನಿನ ಪ್ರಕಾರ ಸರಿಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಜನರು ಯಾವ ಕಾರಣಕ್ಕೆ ಶಿಕ್ಷೆ ಅನುಭವಿಸಬೇಕು? ರಸ್ತೆಯಾದರೆ ಟೋಲ್ ಸಂಗ್ರಹ ಆರಂಭವಾಗುತ್ತದೆ. ಅತ್ತ ಟೋಲ್ ಕೂಡ ನೀಡಬೇಕು, ಇತ್ತ ರಸ್ತೆ ಸರಿಯಾಗುವವರೆಗೆ ಮಣ್ಣಿನ ರಸ್ತೆಯಲ್ಲೇ ಪ್ರಯಾಣಿಸಬೇಕು. ಜನರು ಇದನ್ನು ಪ್ರಶ್ನಿಸುವವರೆಗೂ ಇದು ಹೀಗೆಯೇ ಮುಂದುವರಿಯುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: