ಮಂಗಳೂರು ನಗರದ ರಸ್ತೆ ಕಾಮಗಾರಿ ಕೆಲಸವನ್ನು ತ್ವರಿತಗತಿಯಲ್ಲಿ ಮುಗಿಸಿ ರಸ್ತೆ ಸಂಚಾರಕ್ಕೆ ಯೋಗ್ಯವನ್ನಾಗಿಸಲು ಡಿವೈಎಫ್ ಐ ಮನವಿ
ಮಂಗಳೂರು: ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ವಿವಿಧೆಡೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿದ್ದು ಜನಸಾಮಾನ್ಯರು ದಿನನಿತ್ಯ ಕಷ್ಟವನ್ನನುಭವಿಸುತ್ತಿದ್ದಾರೆ ಎಂದು ಡಿವೈಎಫ್ ಐ ಹೇಳಿದ್ದು, ಶೀಘ್ರವೇ ಕಾಮಗಾರಿ ಮುಗಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಿದೆ.
ಮಂಗಳೂರು ನಗರದ ಹೃದಯ ಭಾಗವಾದ ಬಂದರು ರಸ್ತೆ, ಕ್ಲಾಕ್ ಟವರ್ ರಸ್ತೆ, ರೋಸಾರಿಯೋ ರಸ್ತೆ, ಕಾರ್ ಸ್ಟ್ರೀಟ್ ಹಾಗು ಮತ್ತಿತರ ಪ್ರಮುಖ ರಸ್ತೆಗಳ ಕಾಮಗಾರಿಯು ಏಕಕಾಲಕ್ಕೆ ಪ್ರಾರಂಭಿಸಿ ಬಹುತೇಕ ವರ್ಷ ಪೂರ್ಣಗೊಂಡರೂ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಈವರೆಗು ಸಾದ್ಯವಾಗಿಲ್ಲ. ಈ ರಸ್ತೆಗಳ ನಿಧಾನಗತಿಯ ಕಾಮಗಾರಿಯಿಂದಾಗಿ ನಗರ ಪ್ರದೇಶದ ರಸ್ತೆ ಓಡಾಟದಲ್ಲಿ ವ್ಯತ್ಯಾಸ ಉಂಟಾಗಿ ಎಲ್ಲೆಂದರಲ್ಲಿ ವಾಹನ ದಟ್ಟನೆಯಿಂದ ವಾಹನ ಸವಾರರು ಬಹಳಷ್ಟು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ನಿಧಾನಗತಿಯ ಕಾಮಗಾರಿಯಿಂದ ರಸ್ತೆಗಳು ಮುಚ್ಚಲ್ಪಟ್ಟಿದ್ದು ವಾಹನ ಸವಾರರ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಮುಖ್ಯವಾಗಿ ಬಂದರು ರಸ್ತೆಯ ಕಾಮಗಾರಿಯಿಂದ ಆ ಪ್ರದೇಶದ ಸಗಟು ವ್ಯಾಪಾರಿಗಳು, ಕೂಲಿ, ಹಮಾಲಿ ಕಾರ್ಮಿಕರು, ಮೀನು ವ್ಯಾಪಾರಿಗಳು , ದಿನಕೂಲಿ ನೌಕರರು ಮತ್ತು ಜನಸಾಮಾನ್ಯರು ದಿನನಿತ್ಯ ಕಷ್ಟವನ್ನನುಭವಿಸುತ್ತಿದ್ದಾರೆ. ಅದರಲ್ಲೂ ಬಂದರು ಠಾಣಾ ಪೋಲೀಸರು ತುರ್ತು ಸಂದರ್ಭಗಳಲ್ಲಿ ತಾವು ತೆರಳಬೇಕಾದ ಸ್ಥಳಗಳಿಗೆ ಸಂಚರಿಸಲು ಸಾದ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೊಸಾರಿಯೋ ರಸ್ತೆಯ ಕಾಮಗಾರಿಯಿಂದ ಮೀನಿನ ಧಕ್ಕೆ ಪ್ರದೇಶಕ್ಕೆ ಸಂಚರಿಸುವ ಲಾರಿ ಚಾಲಕರು, ಮೀನು ವ್ಯಾಪಾರಿಗಳು ಕೂಡಾ ಬಂದರು ರಸ್ತೆಯನ್ನೇ ಅವಲಂಭಿಸುವ ಸ್ಥಿತಿ ನಿರ್ಮಾಣವಾಗಿ ಒಟ್ಟು ರಸ್ತೆಯಲ್ಲಿ ದಿನನಿತ್ಯ ವಾಹನ ದಟ್ಟನೆಯಿಂದಾಗಿ ಜನಸಾಮಾನ್ಯರು ಬಹಳಷ್ಟು ಸಮಸ್ಯೆಗಳನ್ನು ಬ್ಲಾಕ್ ನಂತಹ ಕಿರಿಕಿರಿಗಳನ್ನು ದಿನನಿತ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಿದೆ.
ಈ ಹಿನ್ನಲೆಯಲ್ಲಿ ತಾವುಗಳು ನಗರದ ವಿವಿಧೆಡೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯ ವೇಗ ಹೆಚ್ಚಿಸಿ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ಜನಸಾಮಾನ್ಯರ , ವಾಹನ ಸವಾರರ ಸುಗಮ ಸಂಚಾರಕ್ಕೆ ಮುಕ್ತವನ್ನಾಗಿಸಲು ಡಿವೈಎ ಫ್‌ಐ ಮನಪಾಕ್ಕೆ ಮನವಿ ಮಾಡಿದೆ ಎಂದು ಪತ್ರಿಕಾ ಹೇಳಿಕೆಯೊಂದರ ತಿಳಿಸಿದೆ.
ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ನಗರ ಕಾರ್ಯದರ್ಶಿ ಸಾಧಿಕ್ ಕಣ್ಣೂರು, ಶ್ರೀನಾಥ್ ಕಾಟಿಪಳ್ಳ, ಮನ್ಸೂರ್ , ಬಂದರು ಹಮಾಲಿ ಕಾರ್ಮಿಕರ ಮುಖಂಡರಾದ ರಫೀಕ್ ಹರೇಕಳ, ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು.