ಆಡಳಿತದಲ್ಲಿ ನಾಗರಿಕರ ಪಾತ್ರ ಹೆಚ್ಚಾಗಬೇಕು: ಪೃಥ್ವಿ ರೆಡ್ಡಿ
ಸರ್ಕಾರಗಳ ಆಡಳಿತ ಹಾಗೂ ನಾಗರಿಕರ ನಡುವೆ ಅಂತರವಿದ್ದು, ಇವರೆಡರ ನಡುವೆ ಸೇತುವೆ ರಚನೆಯಾಗಿ ಒಂದುಗೂಡಿದಾಗ ಮಾತ್ರ ಜನಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಹೇಳಿದರು.
ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್ ಆಯೋಜಿಸಿದ್ದ “ಆಲ್ ಪಾರ್ಟಿ ಟೌನ್ ಹಾಲ್” ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “15 ವರ್ಷಗಳ ಹಿಂದೆ ಸ್ಮಾರ್ಟ್ ವೋಟ್ ಎಂಬ ಸಂಘಟನೆ ಕಟ್ಟಿಕೊಂಡು ಇಂತಹದ್ದೇ ಚರ್ಚೆಗಳನ್ನು ನಡೆಸುತ್ತಿದ್ದೆವು. ಬೇರೆಬೇರೆ ವಿಷಯಗಳ ಆಧಾರದಲ್ಲಿ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತದೆ, ಆದರೆ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಮಾತ್ರ ಚುನಾವಣೆಯಲ್ಲಿ ಚರ್ಚೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಅಂತಹ ಪ್ರಯತ್ನ ಮಾಡಿದ್ದೆವು. ಅಪಾರ್ಟ್‌ಮೆಂಟ್ ನಿವಾಸಿಗಳು ಕೇವಲ ಮತದಾರರು ಅಷ್ಟೇ ಅಲ್ಲ, ಅನೇಕ ಮತದಾರರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಇರುವ ಪ್ರಭಾವಿಗಳು ಕೂಡ ಆಗಿದ್ದಾರೆ. ತಮ್ಮೊಂದಿಗೆ ಕೆಲಸ ಮಾಡುವವರು, ನೆರೆಹೊರೆಯವರು, ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿ, ಕೆಲಸಗಾರರು, ಚಾಲಕರು ಸೇರಿದಂತೆ ಎಲ್ಲರ ಜೊತೆ ಚರ್ಚಿಸುವ ಅವಕಾಶವಿದೆ. ಅವರು ಇದನ್ನು ಸದುಪಯೋಗ ಪಡಿಸಿಕೊಂಡು ರಾಜಕೀಯವನ್ನು ಸ್ವಚ್ಛಗೊಳಿಸಲು ಮುಂದಾಗಬೇಕು” ಎಂದು ಹೇಳಿದರು.
“ಸರ್ಕಾರದ ನೀತಿಗಳ ಬಗ್ಗೆ ಚರ್ಚೆಯಾಗುವುದಕ್ಕಿಂತ ಮುಖ್ಯವಾಗಿ, ಅವುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ. ಸರ್ಕಾರದ ಆಡಳಿತ ಹಾಗೂ ಜನರ ನಡುವೆ ಹೆಚ್ಚಿನ ಅಂತರವಿದ್ದು, ಇವೆರಡರ ನಡುವೆ ಸೇತುವೆ ನಿರ್ಮಿಸುವ ಕೆಲಸ ಆಗಬೇಕಿದೆ. ಆಗ ಮಾತ್ರ ಜನಸಾಮಾನ್ಯರ ನಿಜವಾದ ಸಮಸ್ಯೆಗಳಿಗೆ ಸರ್ಕಾರದ ಸ್ಪಂದನೆ ಸಾಧ್ಯವಾಗುತ್ತದೆ. ಒಂದು ರಸ್ತೆಯಲ್ಲಿ ರೇಬಿಸ್ ಕಾಯಿಲೆಯಿರುವ ನಾಯಿಯೊಂದು ಜನರಿಗೆ ಕಚ್ಚುತ್ತಿರುವುದು ಸರ್ಕಾರ ಕಚೇರಿಯಲ್ಲಿ ಕುಳಿತಿರುವವರಿಗೆ ತಿಳಿಯಬೇಕೆಂದರೆ, ಜನರೇ ಅಧಿಕಾರಿಗೆ ಮಾಹಿತಿ ನೀಡಬೇಕು. ದೆಹಲಿ ಸರ್ಕಾರದ ಅನೇಕ ಯೋಜನೆಗಳು ಜನರು ನೀಡಿದ ಸಲಹೆಗಳ ಆಧಾರದಲ್ಲಿ ರೂಪಿಸಲ್ಪಟ್ಟಿವೆ. ಆದ್ದರಿಂದಲೇ ಅವು ಯಶಸ್ವಿಯಾಗಿವೆ. ಕರ್ನಾಟಕದಲ್ಲಿ ಕೂಡ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವ ಹೆಚ್ಚಾಗಬೇಕು” ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.
ರಾಜ್ಯ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ, ಕಾಂಗ್ರೆಸ್ ಶಾಸಕರಾದ ರಾಮಲಿಂಗ ರೆಡ್ಡಿ, ಜೆಡಿಎಸ್ ವಕ್ತಾರರಾದ ತನ್ವೀರ್ ಅಹಮದ್ ಸಂವಾದದಲ್ಲಿ ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw