ಆರೆಸ್ಸೆಸ್ ಮತ್ತು ಬಿಜೆಪಿಗೆ ಜನ್ಮ ನೀಡಿರುವುದು ಕಾಂಗ್ರೆಸ್ | ಬಿಎಸ್ ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಹೇಳಿಕೆ
ಚಾಮರಾಜನಗರ: ಆರೆಸ್ಸೆಸ್ ಮತ್ತು ಬಿಜೆಪಿಗೆ ಜನ್ಮ ನೀಡಿರುವುದು ಕಾಂಗ್ರೆಸ್, ಕಾಂಗ್ರೆಸ್ ನ ದುರಾಡಳಿತದಿಂದ ಬಿಜೆಪಿಗೆ ಅಧಿಕಾರ ದೊರಕಿತು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಕೃಷ್ಣಮೂರ್ತಿ ಮಂಡ್ಯ ಹೇಳಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರ ಸಮಿತಿಯು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪಕ್ಷದ ಸಂಸ್ಥಾಪಕ ಕಾನ್ಶಿರಾಂ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಧಿಕಾರದೆಡೆಗೆ ಬಹುಜನರ ನಡಿಗೆ, ಸ್ವಾಭಿಮಾನಿ ಬಹುಜನರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಹಾಗೂ ಬಿಜೆಪಿಗಳು ದೇಶದಲ್ಲಿ ಆಡಳಿತ ನಡೆಸಿ, ರಾಷ್ಟ್ರದ ಆಸ್ತಿ ಮತ್ತು ಸಂಪತ್ತನ್ನು ಶ್ರೀಮಂತರಿಗೆ ಸೇರುವಂತೆ ಮಾಡಿದೆ. ಬಡವರನ್ನು ಬಡವರನ್ನಾಗಿಯೇ ಉಳಿಸಿವೆ. ಇದೇ ಕಾಂಗ್ರೆಸ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು 100 ಬಾರಿ ತಿದ್ದುಪಡಿ ಮಾಡಿ ದುರ್ಬಲಗೊಳಿಸಿದೆ’ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಾರಿಗೆ ನೌಕರರು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಸೌಜನ್ಯಕ್ಕಾದರೂ ಸರ್ಕಾರ ಅವರ ಜೊತೆಗೆ ಮಾತುಕತೆ ನಡೆಸಿಲ್ಲ. ರಾಜ್ಯ ಸರ್ಕಾರ ಜನವಿರೋಧಿ ಸರ್ಕಾರವಾಗಿದ್ದು, ಮನುವಾದಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗಳಿಗೆ ತಕ್ಕ ಪಾಠ ಕಲಿಸಿ ಮುಂದಿನ ಚುನಾವಣೆಯಲ್ಲಿ ಸಂವಿಧಾನದ ಆಶಯಗಳನ್ನು ತನ್ನ ಪ್ರಣಾಳಿಕೆ ಮಾಡಿಕೊಂಡಿರುವ ಬಿಎಸ್ ಪಿಯನ್ನು ಬೆಂಬಿಸುವಂತೆ ಅವರು ಮನವಿ ಮಾಡಿದರು.
ತಾಲ್ಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಬಸವಣ್ಣ ಬ್ಯಾಡಮೂಡ್ಲು, ಜಿಲ್ಲಾ ಕಾರ್ಯದರ್ಶಿ ಶಿವಣ್ಣ ದೇವಾಲಾಪುರ, ಖಜಾಂಚಿ ರಾಜೇಂದ್ರ, ಮುಖಂಡ ದೌಲತ್‌ಪಾಷ, ಕ್ಷೇತ್ರ ಉಸ್ತುವಾರಿ ರಾಜಶೇಖರ್ ಚಂದಕವಾಡಿ, ತಾಲ್ಲೂಕು ಸಂಯೋಜಕ ಎಸ್.ಪಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್, ಖಜಾಂಚಿ ಸಿದ್ದೇಶ್‌ವಡ್ಡರಹಳ್ಳಿ, ಮಹಿಳಾ ಘಟಕದ ರಾಮಸಮುದ್ರ ಸುಶೀಲ, ಬಿವಿಎಫ್ ರವಿಮೌರ್ಯ ಇದ್ದರು.