ಆರೋಗ್ಯ ಸಚಿವರ ಜೊತೆಗೆ ಆಸ್ಪತ್ರೆಗೆ ಬಂದಾತ ವೈದ್ಯರಿಗೇ ಬ್ಲ್ಯಾಕ್ ಮೇಲ್ ಮಾಡಿದ!
ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಸುಧಾಕರ್ ಜೊತೆಗೆ ಆಸ್ಪತ್ರೆಗೆ ತೆರಳಿದ್ದ ಅಧಿಕಾರಿಯೊಬ್ಬ ಆರೋಗ್ಯಾಧಿಕಾರಿಗಳಿಗೆ ಬೆದರಿಕೆ ಹಾಕಿ ರೆಮ್ಡಿಸಿವಿರ್ ಔಷಧಿಗಳಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಿಂದ ವರದಿಯಾಗಿದೆ.
ಮೇ 13 ಹಾಗೂ ಮೇ 14ರಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಭೇಟಿಯ ವೇಳೆ ಜೊತೆಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಜಂಟಿ ನಿರ್ದೇಶಕ ಡಾ.ಮುರಳಿ ಕೃಷ್ಣ ಅವರು ಶಿಡ್ಲಘಟ್ಟ ಹಾಗೂ ಬಾಗೇಪ್ಲಿ ತಾಲೂಕು ಆರೋಗ್ಯಾಧಿಕಾರಿಗಳಿಂದ ಬಲವಂತವಾಗಿ ಬೆದರಿಕೆ ಹಾಕಿ ಇಬ್ಬರ ಬಳಿಯೂ 5 ವಯಲ್ ರೆಮ್ ಡಿಸಿವಿರ್ ಔಷಧಿಯನ್ನು ಪಡೆದಿದ್ದಾನೆ.
ಘಟನೆ ಸಂಬಂಧ ಬಾಗೇಪಲ್ಲಿ ಟಿಎಚ್ ಒ ಡಾ.ಸತ್ಯನಾರಾಯಣ ಅವರು ಪೊಲೀಸರಿಗೆ ದೂರು ನೀಡಿದ್ದು, ಇದರಿಂದಾಗಿ ಈ ಘಟನೆ ಬೆಳಕಿಗೆ ಬಂದಿದೆ. ದೂರು ನೀಡಿದ ಬೆನ್ನಲ್ಲೇ ಆರೋಪಿ ಮುರಳಿ ಕೃಷ್ಣ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರ ಬಳಿಯಿಂದ ರೆಮ್ಡಿಸಿವಿರ್ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.