ಸಚಿವರ ಮೇಲೆ ಬಾಂಬ್ ದಾಳಿ; ಸಚಿವ ಸೇರಿದಂತೆ ಕಾರ್ಯಕರ್ತರಿಗೆ ಗಂಭೀರ ಗಾಯ
ಕೋಲ್ಕತ್ತಾ: ಟಿಎಂಸಿ ಸಚಿವ ಹಾಗೂ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ ನಡೆದ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ನಿಮ್ತಿಟಾ ರೈಲು ನಿಲ್ದಾಣದ ಹೊರಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ.
ದುಷ್ಕರ್ಮಿಗಳು ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದು, ಪರಿಣಾಮವಾಗಿ ಉಪ ಕಾರ್ಮಿಕ ಸಚಿವ ಜಾಕಿರ್ ಹೊಸೇನ್ ಹಾಗೂ ಟಿಎಂಸಿಯ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಸಚಿವ ಜಾಕಿರ್ ಹುಸೇನ್ ಅವರ ದೇಹದ ಎಡಭಾಗ, ಮುಖ್ಯವಾಗಿ ಎಡಗಾಲಿಗೆ ತೀವ್ರ ಗಾಯವಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಸದ್ಯ ಸಚಿವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಕೋಲ್ಕತ್ತಾಕ್ಕೆ ಕರೆದೊಯ್ಯಲಾಗಿದೆ. ಬುಧವಾರ ರಾತ್ರಿ ಜಂಗಿಪುರ್ ನಗರದ ನಿಮ್ತಿಟಾ ರೈಲು ನಿಲ್ದಾಣದ ಕಡೆಗೆ ಜಾಕೀರ್ ಹೊಸೇನ್ ತಮ್ಮ ಬೆಂಗಾವಲಿನ ಜತೆಗೆ ನಡೆದುಕೊಂಡು ತೆರಳುತ್ತಿದ್ದಾಗ ಅಪರಿಚಿತರು ದಾಳಿ ನಡೆಸಿದ್ದಾರೆ.
ಇನ್ನೂ ಈ ಘಟನೆಯ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಮುರ್ಶಿದಾಬಾದ್ ಟಿಎಂಸಿ ಜಿಲ್ಲಾಧ್ಯಕ್ಷ ಅಬು ತೆಹೆರ್ ಖಾನ್ ಆರೋಪಿಸಿದ್ದು, ಈ ಆರೋಪವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ನಿರಾಕರಿಸಿದ್ದಾರೆ.