ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪ್ರಮಾಣ ವಚನಕ್ಕೆ ದಿನ, ಸಮಯ ನಿಗದಿ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ, ಸಮಯ ನಿಗದಿಯಾಗಿದ್ದು, ನಾಳೆ ಸಂಜೆ(ಬುಧವಾರ) ಸಂಜೆ ನಾಲ್ಕು ಗಂಟೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಂಗಳವಾರ ಸಂಜೆ ಅಂದರೆ, ಇಂದು ಸಂಜೆ ಯಾರಿಗೆಲ್ಲ ಸಚಿವ ಸ್ಥಾನ ನೀಡಲಾಗಿದೆ ಎನ್ನುವುದನ್ನು ಖುದ್ದಾಗಿ ಮಾಹಿತಿ ನೀಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ಊಹಾಪೂಹಾಗಳು ಸತ್ಯಕ್ಕೆ ದೂರವಾಗಿವೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಖಾಲಿ ಇರುವ 7 ಸಚಿವ ಸ್ಥಾನಗಳ ಪೈಕಿ 6 ಸ್ಥಾನಗಳ ಹೆಸರು ಫೈನಲ್ ಆಗಿವೆ ಉಳಿದ 1 ಸ್ಥಾನಕ್ಕಾಗಿ ಅರವಿಂದ ಲಿಂಬಾವಳಿ ಹಾಗೂ ಸಿಪಿ ಯೋಗೇಶ್ವರ್ ನಡುವೆ ಸ್ಪರ್ಧೆ ಇದೆ ಎಂದು ಹೇಳಲಾಗುತ್ತಿದೆ.
ಹಳೆಯ ಸಚಿವರ ಸ್ಥಾನಕ್ಕೆ ಹೊಸಬರನ್ನು ಹಾಕಲು ಸಿಎಂ ಯಡಿಯೂರಪ್ಪನವರು ಚಿಂತಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಸದ್ಯ ಸಚಿವ ಸಂಪುಟ ವಿಸ್ತರಣೆಯಿಂದ ಮತ್ತೆ ಬಿಜೆಪಿಯೊಳಗೆ ಅಸಮಾಧಾನ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.