ಸಚಿವರಾಗುತ್ತಿದ್ದಂತೆಯೇ ಶೋಭಾ ಕರಂದ್ಲಾಜೆ ಮೊದಲು ಮಾಡಿದ ಕೆಲಸ ಏನು ಗೊತ್ತಾ? | ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆ
ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ನೂತನ ಸಚಿವರಾಗಿ ಆಯ್ಕೆಯಾಗುತ್ತಿದ್ದಂತೆಯೇ ಮೊದಲು ತಮ್ಮ ಟ್ವಿಟ್ಟರ್ ಖಾತೆಯ ಹಿಸ್ಟರಿ ಡಿಲೀಟ್ ಮಾಡಿದ್ದು, 11 ವರ್ಷಗಳಿಂದ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದ ಶೋಭಾ ಕರಂದ್ಲಾಜೆ ಅವರ ಟ್ವಿಟ್ಟರ್ ನಲ್ಲಿ ಇದೀಗ ಕೇವಲ 2 ಟ್ವೀಟ್ ಗಳು ಮಾತ್ರವೇ ಕಂಡು ಬರುತ್ತಿದೆ.
ಪಕ್ಷದ ಎಲ್ಲ ನಡೆಗಳ ಸಂದರ್ಭಗಳಲ್ಲಿಯೂ ಪಕ್ಷದ ಬೆನ್ನಿಗೆ ನಿಲ್ಲುತ್ತಿದ್ದ ಶೋಭಾ ಕರಂದ್ಲಾಜೆ ಅವರು ತಮ್ಮ ಖಾತೆಯಲ್ಲಿ ಹಲವಾರು ಟ್ವೀಟ್ ಗಳನ್ನು ಮಾಡಿದ್ದರು. ಕೆಲವು ಟ್ವೀಟ್ ಗಳು ಕೋಮು ಸೌಹಾರ್ದದ ವಿರುದ್ಧವಾದದ್ದು ಎನ್ನುವ ಟೀಕೆಗಳಿಗೂ ಗುರಿಯಾಗಿತ್ತು. ಸಚಿವರಾಗುತ್ತಿದ್ದಂತೆಯೇ ಈ ಟ್ವೀಟ್ ಗಳಿಂದ ಸಮಸ್ಯೆಗಳಾಗಬಹುದು ಎನ್ನುವ ಕಾರಣಕ್ಕಾಗಿ ಟ್ವಿಟ್ಟರ್ ಹಿಸ್ಟರಿ ಡಿಲೀಟ್ ಮಾಡಿರಬಹುದು ಎನ್ನುವ ಮಾತುಗಳು ಸದ್ಯ ಕೇಳಿ ಬಂದಿವೆ.
ಶೋಭಾ ಕರಂದ್ಲಾಜೆ ಅವರ ಟ್ವಿಟ್ಟರ್ ನಲ್ಲಿ 2.79 ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರ ಹಳೆಯ ಟ್ವೀಟ್ ಗಳು ವೈರಲ್ ಆಗಿ ಅವರು ಸಂಕಷ್ಟಕ್ಕೀಡಾಗಿದ್ದರು. ಹೀಗೆ ಹಳೆಯ ಟ್ವೀಟ್ ಗಳಿಂದಾಗಿ ಸದ್ಯ ಬಹಳಷ್ಟು ಗಣ್ಯರು ತಮ್ಮ ಸ್ಥಾನವನ್ನು ಕೂಡ ಕಳೆದುಕೊಂಡಿದ್ದಾರೆ. ಹೀಗಾಗಿ ಸಚಿವ ಸ್ಥಾನದ ದೊರಕಿದ ಬೆನ್ನಲ್ಲೇ ವಿವಾದಗಳು ಬೇಡ ಎನ್ನುವ ಕಾರಣಕ್ಕಾಗಿ ಹಳೆಯ ಟ್ವೀಟ್ ಗಳನ್ನು ಡಿಲೀಟ್ ಮಾಡಿದರೆ, ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಇನ್ನೂ ಶೋಭಾ ಕರಂದ್ಲಾಜೆ ಅವರ ಹಳೆಯ ಟ್ವೀಟ್ ಗಳನ್ನು ಡಿಲೀಟ್ ಮಾಡುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ ಟೀಕೆ-ಟಿಪ್ಪಣಿಗಳು ಸುರಿಮಳೆಯೇ ನಡೆದಿದೆ.