ಸದನದಲ್ಲಿ ‘ಸಿಡಿ’ ‘ಸಿಡಿ’ ಎಂದು ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು!
ಬೆಂಗಳೂರು: ಕಾಂಗ್ರೆಸ್ ಶಾಸಕ ಸದನದಲ್ಲಿ ತಮ್ಮ ಅಂಗಿ ಬಿಚ್ಚುವ ಮೂಲಕಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅರಗ ಜ್ಞಾನೇಂದ್ರ ಹಕ್ಕುಚ್ಯುತಿ ಮಂಡಿಸಿದ್ದು, ಈ ವೇಳೆ ಸದನಲ್ಲಿ ಭಾರೀ ಗದ್ದಲ ಸೃಷ್ಟಿಯಾಗಿದೆ.
ಹಕ್ಕುಚ್ಯುತಿ ಮಂಡನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಳಿಗೆ ಶಿಫಾರಸು ಮಾಡಿದ್ದಾರೆ. ಇದನ್ನು ವಿರೋಧಿಸಿದ ಕಾಂಗ್ರೆಸ್, ಈ ಹಿಂದೆ ಗೂಳಿಹಟ್ಟಿ ಶೇಖರ್ ಸದನದಲ್ಲಿ ಬಟ್ಟೆ ಹರಿದು ಹಾಕಿದ ಸಂದರ್ಭದಲ್ಲಿ ಯಾವುದೇ ಕ್ರಮಕೈಗೊಳ್ಳದವರು ಈಗ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸದನ ಪ್ರಜಾಪ್ರಭುತ್ವದ ದೇಗುಲವಾಗಿದೆ. ಇಲ್ಲಿ ಅವರು ಬಟ್ಟೆ ಬಿಚ್ಚಿ, ಸಭಾಧ್ಯಕ್ಷರ ಬಗ್ಗೆ ಅತ್ಯಂತ ಅವಹೇಳನಾಕಾರಿ ಮಾಯುಗಳನ್ನಾಡಿದ್ದಾರೆ. ಇದರಿಂದ ಹಕ್ಕು ಚ್ಯುತಿ ಮಂಡನೆಯನ್ನು ಮಂಡಳಿಗೆ ಕಳುಹಿಸುತ್ತೇನೆ ಎಂದು ಸ್ಪೀಕರ್ ಹೇಳಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದ್ದು, ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಇದೇ ವೇಳೆ ಸಿಡಿ, ಸಿಡಿ ಎಂದು ಜೋರಾಗಿ ಘೋಷಣೆ ಕೂಗುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.