1ರಿಂದ 5ನೇ ತರಗತಿವರೆಗೆ ಶಾಲೆಗಳು ಸದ್ಯಕ್ಕೆ ತೆರೆಯುವುದು ಅನುಮಾನ | ಶಾಲೆ ತೆರೆಯುವ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ!
ಬೆಂಗಳೂರು: ಮಾರ್ಚ್ 1ರಿಂದ ಒಂದನೇ ತರಗತಿಯಿಂದ 5ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು ತೀರ್ಮಾನ ಕೈಗೊಂಡಿದ್ದ ಸರ್ಕಾರ ಇದೀಗ ಕೊರೊನಾ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಹಿಂದಕ್ಕೆ ಸರಿದಿದೆ.
ಇನ್ನೂ ಕೆಲವು ಖಾಸಗಿ ಶಾಲೆಗಳು ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದೆ ಎನ್ನುವ ಮಾಹಿತಿ ಸರ್ಕಾರಕ್ಕೆ ದೊರಕಿದ್ದು, ಈ ನಿಟ್ಟಿನಲ್ಲಿ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಈ ವಿಚಾರವನ್ನು ಹುಬ್ಬಳ್ಳಿಯಲ್ಲಿ ಸಚಿವರು ತಿಳಿಸಿದರು.
ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆಯ ತಜ್ಞರ ವರದಿ ಕೇಳಲಾಗಿದ್ದು, ಈ ವರದಿ ಬಂದ ಬಳಿಕವೇ ಶಾಲೆ ಆರಂಭದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
2ನೇ ಹಂತದಲ್ಲಿ ಕೊರೊನಾ ವೈರಸ್ ಹಾವಳಿ ಆರಂಭಗೊಂಡಿರುವುದರಿಂದ ಸದ್ಯ ಆರೋಗ್ಯ ಇಲಾಖೆ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ನಿರ್ಧಾರ ಪ್ರಕಟಿಸುವುದು ಅನುಮಾನ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಭವಿಷ್ಯದ ಬಗ್ಗೆಯೂ ಸರ್ಕಾರ ಯೋಚಿಸಬೇಕಿದೆ. ಅವರ ಶಿಕ್ಷಣಕ್ಕೆ ತೊಂದರೆಯಾಗದಂತೆ ಸರ್ಕಾರ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿವೆ.