ಶಾಲೆಯಲ್ಲಿ ಬೆಂಚ್ ಗಾಗಿ ಗಲಾಟೆ: ತನ್ನ ಸಹಪಾಠಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ ಎಸೆಸೆಲ್ಸಿ ವಿದ್ಯಾರ್ಥಿ
ಲಕ್ನೋ: ಕುಳಿತುಕೊಳ್ಳುವ ಬೆಂಚ್ ಗಾಗಿ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿ ಗುಂಡು ಹಾರಿಸಿ ಇನ್ನೋರ್ವ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಕ್ರಿಮಿನಲ್ ಗಳ ಸ್ವರ್ಗ ಎಂದೇ ಕರೆಯಲ್ಪಡುತ್ತಿರುವ ಉತ್ತರಪ್ರದೇಶದಲ್ಲಿ ನಡೆದಿದೆ.
ಕುಳಿತುಕೊಳ್ಳುವ ಬೆಂಚ್ ನ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ದಿನ ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ಗಲಾಟೆ ನಡೆದ ಮರುದಿನ ತನ್ನ ಚಿಕ್ಕಪ್ಪನ ಪಿಸ್ತೂಲ್ ತೆಗೆದುಕೊಂಡು ಬಂದ ಆರೋಪಿ ಇನ್ನೋಬ್ಬ ವಿದ್ಯಾರ್ಥಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಮೂರು ಗುಂಡುಗಳು ತಲೆ, ಹೊಟ್ಟೆ, ಎದೆಯ ಮೇಲೆ ನುಗ್ಗಿದ್ದು , ಪರಿಣಾಮವಾಗಿ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಗುಂಡು ಹಾರಿಸಿದ ಬಳಿಕ ವಿದ್ಯಾರ್ಥಿ ಶಾಲೆಯಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಶಾಲೆಯ ಶಿಕ್ಷಕರು ಆತನನ್ನು ಉಪಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಾದ ಇವರಿಬ್ಬರ ನಡುವೆ ಹಿಂದಿನ ದಿನ ಅಂದರೆ, ಬುಧವಾರ ಬೆಂಚ್ ನ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಹೊಡೆದಾಟ ನಡೆದಿತ್ತು. ಈ ಸಂದರ್ಭ ಶಿಕ್ಷಕರು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದ್ದರು. ಆದರೆ ಓರ್ವ ವಿದ್ಯಾರ್ಥಿ ಈ ವಿಚಾರವನ್ನು ಅಲ್ಲಿಯೇ ಬಿಡದೆ ಮರುದಿನ ಚಿಕ್ಕಪ್ಪನ ಪಿಸ್ತೂಲ್ ತೆಗೆದುಕೊಂಡು ಬಂದು ಅನಾಹುತವನ್ನೇ ಸೃಷ್ಟಿಸಿದ್ದಾನೆ. ಘಟನೆ ಸಂಬಂಧ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.