ಲೀಸ್ ಹಣದ ವಿಚಾರದಲ್ಲಿ ಜಗಳ: ಸಹೋದರ ಹಾಗೂ ಆತನ ಮಗನ ಬರ್ಬರ ಹತ್ಯೆ
ಚಿಕ್ಕಬಳ್ಳಾಪುರ: ಬಾಡಿಗೆ ಮನೆಯ ಲೀಸ್ ಹಣದ ವಿಚಾರದಲ್ಲಿ ಅಣ್ಣ-ತಮ್ಮಂದಿರು ಮಾರಕಾಸ್ತ್ರಗಳಿಂದ ಹೊಡೆದಾಟ ನಡೆಸಿದ್ದು, ಪರಿಣಾಮವಾಗಿ ಇಬ್ಬರು ಹತ್ಯೆಗೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಶ್ರೀರಾಮ ನಗರದಲ್ಲಿ ನಡೆದಿದೆ.
45 ವರ್ಷ ವಯಸ್ಸಿನ ಅಂಜಿನಪ್ಪ ಹಾಗೂ 18 ವರ್ಷ ವಯಸ್ಸಿನ ವಿಷ್ಣು ಹತ್ಯೆಗೀಡಾದವರಾಗಿದ್ದಾರೆ. ಸೀನಪ್ಪ ಹಾಗೂ ಸರೋಜಮ್ಮ ಎಂಬವರಿಗೆ ಅಶ್ವಥ್ ನಾರಾಯಣ್ ಹಾಗೂ ಅಂಜಿನಪ್ಪ ಎಂಬ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಗಂಡು ಮಕ್ಕಳಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ತಂದೆ ಸೀನಪ್ಪ ಸಂಪಾದನೆ ಮಾಡಿ ಕಟ್ಟಿಸಿದ್ದ ಬಾಡಿಗೆ ಮನೆಗಳಿಂದ ಬರುತ್ತಿದ್ದ ಹಣವನ್ನ ಅಶ್ವಥ್ ನಾರಾಯಣ್ ಮಾತ್ರ ಪಡೆದುಕೊಳ್ಳುತ್ತಿದ್ದನಂತೆ. ಬಾಡಿಗೆ ಹಣ ಪಡೆಯುತ್ತಿದ್ದ ಅಶ್ವಥ್‍ನಾರಾಯಣ್ ತಂದೆ-ತಾಯಿಯನ್ನ ಸಹ ಚೆನ್ನಾಗಿ ನೋಡಿ ಕೊಳ್ಳುತ್ತಿರಲಿಲ್ಲ ಎಂದು ಇತರ ಮಕ್ಕಳು ಆರೋಪಿಸುತ್ತಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಶ್ವಥ್ ನಾರಾಯಣ್ ಹಾಗೂ ಅಂಜಿನಪ್ಪ ನಡುವೆ ಗಲಾಟೆ ನಡೆದಿದೆ. ನಿನ್ನೆಯಷ್ಟೇ ಪೊಲೀಸ್ ಠಾಣೆಗೆ ಕೂಡ ಇಬ್ಬರೂ ಹೋಗಿ ಬಂದಿದ್ದರು ಎಂದು ಹೇಳಲಾಗಿದೆ.
ಇದೇ ವಿಚಾರವಾಗಿ ತಡರಾತ್ರಿ ಅಶ್ವಥ್ ನಾರಾಯಣ್ ಹಾಗೂ ವಿಷ್ಣು, ಅಂಜಿನಪ್ಪ ಜೊತೆ ಮಾತನಾಡಲು ತಾಯಿ ಸರೋಜಮ್ಮ ಮನೆ ಬಳಿ ತೆರಳಿದ್ದು, ಮಾತಿನ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಪರಸ್ಪರ ಚಾಕುಬೀಸಿಕೊಂಡಿದ್ದಾರೆ. ಇದರಿಂದಾಗಿ ಅಂಜಿನಪ್ಪ ಹಾಗೂ ವಿಷ್ಣು ಸಾವನ್ನಪ್ಪಿದ್ದಾರೆ.
ವಿಷ್ಣು ಅಂಜಿನಪ್ಪನವರ ಮಗನೇ ಆಗಿದ್ದು, ಅಂಜಿನಪ್ಪ ಅವರಿಗೆ ಮೂರು ಜನ ಗಂಡು ಮಕ್ಕಳಿದ್ದು, ಅಶ್ವಥ್ ನಾರಾಯಣ್ ಗೆ ಮೂರು ಜನ ಹೆಣ್ಣುಮಕ್ಕಳಿದ್ದರು. ಹೀಗಾಗಿ ಚಿಕ್ಕವಯಸ್ಸಿನಲ್ಲಿಯೇ ಅಂಜಿನಪ್ಪರ ಮಗನನ್ನು ಅಶ್ವಥ್ ನಾರಾಯಣ್ ದತ್ತು ಪಡೆದಿದ್ದ. ಆದರೆ ಇಷ್ಟೆಲ್ಲ ಸೌಹಾರ್ದ ಇದ್ದ ಕುಟುಂಬ ಇದೀಗ ವಿವೇಚನೆ ಇಲ್ಲದ ಜಗಳದಿಂದ ಕೋಪವನ್ನು ಬುದ್ಧಿಯ ಕೈಗೆ ಕೊಟ್ಟು ದುರಂತ ಸಾವಿಗೆ ಕಾರಣರಾಗಿದ್ದಾರೆ.