ಸಾಲದ ನೇಣಿಗೆ ಏರಿದ ಒಂದೇ ಕುಟುಂಬದ ನಾಲ್ವರು | ಹೃದಯ ಕರಗಿಸುತ್ತೆ ರೈತನ ಡೆತ್ ನೋಟ್!
ಹೈದರಾಬಾದ್: ಕೋಟಿ ಕೋಟಿ ಸಾಲ ಮಾಡಿ ಬ್ಯಾಂಕ್ ಗಳನ್ನೇ ಮುಳುಗಿಸಿದ ಉದ್ಯಮಿಗಳು ಆರಾಮವಾಗಿ ವಿದೇಶದಲ್ಲಿದ್ದಾರೆ. ಆದರೆ ಕೃಷಿ ಮಾಡಲು ಸಾಲ ಮಾಡುವ ರೈತ ಹಾಗೂ ಆತನ ಕುಟುಂಬ ಯಾವಾಗಲೂ ಸಾಲಗಾರರ ಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಸದ್ಯ ದೇಶದ ಪರಿಸ್ಥಿತಿ.
ಕೃಷಿ ಮಾಡಲು ಮಾಡಿದ ಸಾಲವನ್ನು ವಾಪಸ್ ನೀಡಲು ಸಾಧ್ಯವಾಗದೇ ನೊಂದ ರೈತರನ ಕುಟುಂಬವೊಂದು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಹೈದರಾಬಾದ್ ನ ಮಂಚಿರ್ಯಾಲ ಜಿಲ್ಲೆಯ ಮಲ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.
40 ವರ್ಷ ವಯಸ್ಸಿನ ರೈತ ರಮೇಶ್ ಹಾಗೂ ಅವರ ಪತ್ನಿ ಹಾಗೂ 19 ವರ್ಷದ ಅವರ ಮಗಳು ಸೌಮ್ಯಾ ಹಾಗೂ 17 ವರ್ಷ ವಯಸ್ಸಿನ ಮಗ ಅಕ್ಷಯ್ ನೇಣಿಗೆ ಶರಣಾದವರಾಗಿದ್ದಾರೆ.
ಇನ್ನೂ ಡೆತ್ ನೋಟ್ ಬರೆದಿಟ್ಟಿರುವ ಈ ಕುಟುಂಬ ಸಾಲಗಾರರಿಗೆ ಹಣ ವಾಪಸ್ ನೀಡುತ್ತೇವೆ ಎಂದು ಮಾತುಕೊಟ್ಟಿದ್ದೆವು ಆದರೆ ನಮ್ಮಿಂದ ಈ ಹಣವನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗುತ್ತಿಲ್ಲ ಎಂದು ನಾವು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ರಮೇಶ್ ಅವರು ಕೃಷಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಆದರೆ ಕಳೆದ ವರ್ಷ ಸಾಕಷ್ಟು ಬೆಳೆ ಹಾನಿಯಾಗಿದೆ. ಹೀಗಾಗಿ ಸಾಲ ತೀರಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಈ ನಡುವೆ ಸಾಲ ನೀಡಿರುವವರ ಒತ್ತಡವೂ ಅತಿಯಾಗಿತ್ತು. ನಿನ್ನೆ ಸಾಲವನ್ನು ವಾಪಸ್ ಕೊಡುತ್ತೇವೆ ಎಂದು ಅವರು ಹೇಳಿದ್ದರು. ಆದರೆ ಅವರ ಬಳಿಯಲ್ಲಿ ಹಣ ಇರಲಿಲ್ಲ. ಹೀಗಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರ್ಕಾರಗಳು ಮನಸ್ಸು ಮಾಡಿದರೆ, ಖಂಡಿತವಾಗಿಯೂ ರೈತರ ಆತ್ಮಹತ್ಯೆಯನ್ನು ನಿಯಂತ್ರಿಸಬಹುದು. ಸಾಲ ಪಾವತಿಸಲು ಸಾಧ್ಯವಾಗದೇ ಆತ್ಮಹತ್ಯೆಯ ಸ್ಥಿತಿಯಲ್ಲಿರುವವರಿಗಾಗಿ ಹೆಲ್ಪ್ ಲೈನ್ ನ್ನು ಎಲ್ಲ ರಾಜ್ಯಗಳಲ್ಲಿಯೂ ಜಾರಿ ಮಾಡುವ ಅಗತ್ಯವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿರುವ ರೈತರಿಂದ ದೂರು ಪಡೆದು, ಅವರಿಗೆ ಸಾಲ ಮರುಪಾವತಿಗೆ ಇನ್ನಷ್ಟು ಸಮಯ ಒದಗಿಸಲು ಸರ್ಕಾರಗಳು ಕೆಲಸ ಮಾಡಿದರೆ, ಖಂಡಿತಾ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಬಹುದು.
ಕಳ್ಳತನದ ಆರೋಪ ಹೊರಿಸಿ ಬದುಕಿ ಬಾಳಬೇಕಿದ್ದ ಬಾಲಕನನ್ನು ಥಳಿಸಿಕೊಂದ ಅಂಗಡಿ ಮಾಲಕ !