ರುಚಿಗೆ ತಕ್ಕಷ್ಟು ಉಪ್ಪು; ಮಿಕ್ಕಿದ್ದು…..
- ಉದಂತ ಶಿವಕುಮಾರ್
ತಿನಿಸಿಗೆ ರುಚಿಯನ್ನು ಕೊಡುವ ಸಲುವಾಗಿ ಬಳಸುವ ಉಪ್ಪು, ಸೋಡಿಯಂ ಕ್ಲೋರೈಡ್ ಎಂಬ ಸಂಯುಕ್ತ. ಇದನ್ನು “ಅಡಿಗೆ ಉಪ್ಪು”ಎಂದು ಕರೆಯುವುದುಂಟು. ಜೀವಿಗಳ ದೇಹ ಪೋಷಣೆಗೆ ಉಪ್ಪು ಅತ್ಯಗತ್ಯ. ಅನೇಕ ಕೈಗಾರಿಕೆಗಳಲ್ಲಿ ಅದೊಂದು ಅನಿವಾರ್ಯ ಕಚ್ಚಾ ಪದಾರ್ಥ.
ಪ್ರಪಂಚದ ಉತ್ಪಾದನೆಯ ಶೇಕಡ 70ಕ್ಕಿಂತಲೂ ಹೆಚ್ಚು ಪಾಲು ಉಪ್ಪು ಕೈಗಾರಿಕೆಗಳಿಗೇ ಮೀಸಲು. ಸಮುದ್ರದ ನೀರು ಮತ್ತಿತರ ಉಪ್ಪಿನ ದ್ರಾವಣಗಳೇ ಉಪ್ಪಿನ ಮೂಲಗಳು. ಉಪ್ಪು ಇತರ ಖನಿಜಗಳಂತೆ ಭೂಮಿಯಲ್ಲಿ ಶೇಖರವಾಗಿರುವುದುಂಟು. ಹೀಗೆ ಶೇಖರವಾಗಿರುವ ಉಪ್ಪನ್ನು “ಕಲ್ಲುಪ್ಪು” ಎನ್ನುತ್ತಾರೆ.
ಭಾರತ, ಚೀನಾ ಮತ್ತು ಭೂಮಧ್ಯ ಸಮುದ್ರ ತೀರಗಳಲ್ಲಿ ಕಡಲ ನೀರಿನಿಂದ ಉಪ್ಪನ್ನು ತೆಗೆಯುವುದು ಒಂದು ಪ್ರಮುಖ ಕೈಗಾರಿಕೆ. ಸಮುದ್ರದ ನೀರನ್ನು ವಿಶಾಲವಾದ ಮಾಳಗಳಿಗೆ ಹರಿಯಬಿಟ್ಟು, ಸೂರ್ಯನ ಶಾಖಕ್ಕೆ ನೀರು ಆವಿಯಾಗಿ ತಳದಲ್ಲಿ ಸ್ಪಟಿಕೀಕರಣಗೊಂಡ ಉಪ್ಪು ಶೇಖರವಾಗುವಂತೆ ಮಾಡುವುದು ಇಲ್ಲಿ ಅನುಸರಿಸುವ ಪದ್ಧತಿ. ಹೀಗೆ ಇಂಗಿಸಿ ಉಪ್ಪು ಮಾಡುವಾಗ ಮ್ಯಾಗ್ನೀಸಿಯಂ ಕ್ಲೋರೈಡ್, ಮ್ಯಾಗ್ನೀಸಿಯಂ ಸಲ್ಫೇಟ್, ಕ್ಯಾಲ್ಸಿಯಂ ಸಲ್ಫೇಟ್, ಪೋಟಾಸಿಯಂ ಕ್ಲೋರೈಡ್, ಮುಂತಾದ ಲವಣಗಳು ಕೂಡಾ ಸೋಡಿಯಂ ಕ್ಲೋರೈಡ್ ಜೊತೆ ಉಳಿಯುತ್ತವೆ. ಉಪ್ಪು ನೀರನ್ನು ಇಂಗಿಸುವ ಮುನ್ನ ಕಶ್ಮಲಗಳನ್ನು ಶೋಧಿಸಿ ಬೇರ್ಪಡಿಸಬೇಕಾಗುತ್ತದೆ ಸೂಕ್ತ ರಾಸಾಯನಿಕಗಳನ್ನು ಸೇರಿಸಿ ಇತರ ಲವಣಗಳಲ್ಲಿ ಪ್ರತಿಯೊಂದು ಪ್ರತ್ಯೇಕವಾಗಿ ಸಂಯೋಗಗೊಂಡು ಬೇರೆಯಾಗುವಂತೆ ಮಾಡಬೇಕಾಗುತ್ತದೆ. ಆದ್ದರಿಂದ ಒಂದಾದ ಮೇಲೊಂದು ಮಾಳಕ್ಕೆ ಉಪ್ಪು ನೀರನ್ನು ಹಾಯಿಸುತ್ತ ಪ್ರತಿ ಹಂತದಲ್ಲೂ ಅದನ್ನು ಶುದ್ದೀಕರಿಸುತ್ತಾರೆ.
ಘನರೂಪದಲ್ಲಿರುವ ಉಪ್ಪನ್ನು, ಗಣಿಗಳಲ್ಲಿ ಅದಿರನ್ನು ತೋಡುವಂತೆಯೇ ತೊಡುತ್ತಾರೆ. ಆಳವಾದ ಉಪ್ಪಿನ ಸಂಗ್ರಹದವರೆಗೂ ಕೊಳವೆಗಳನ್ನು ದೂಡಿ ಹೊರ ಕೊಳವೆಯ ಮೂಲಕ ನೀರನ್ನು ಹಾಯಿಸುತ್ತಾರೆ. ಉಪ್ಪು ಆ ನೀರಿನಲ್ಲಿ ಕರಗುತ್ತದೆ. ನೀರಿನ ಒತ್ತಡದಿಂದ ಉಪ್ಪು ನೀರು ಮಧ್ಯಭಾಗದಲ್ಲಿ ಕೊಳವೆಯಲ್ಲಿ ಮೇಲೇಳುತ್ತದೆ.ಹೀಗೆ ಉಪ್ಪು ದ್ರಾವಣ ಮೇಲೇರಲು ಅನುಕೂಲವಾಗುವಂತೆ ಹೊರಕೊಳವೆಯ ಮೂಲಕ ಒತ್ತರಿಸಿದ ಗಾಳಿಯನ್ನು ತಳ್ಳುವುದೂ ಉಂಟು.
ಸೂರ್ಯನ ಶಾಖದಿಂದ ಮಾತ್ರವಲ್ಲದೆ ಕೃತಕವಾಗಿ ಉಪ್ಪು ನೀರನ್ನು ಇಂಗಿಸುವ ಪದ್ಧತಿಯೂ ಇದೆ. ಸುರಳಿ ಸುತ್ತಿದ ಕೊಳವೆಗಳನ್ನು ವಿಸ್ತಾರವಾಗಿ ಹಾಯಿಸಿರುತ್ತಾರೆ. ಅವುಗಳ ಮೂಲಕ ಉಗಿಯನ್ನು ಹಾಯಿಸಿದಾಗ ಕೊಳದಲ್ಲಿ ತುಂಬಿದ ಉಪ್ಪು ನೀರಿನಿಂದ ನೀರಿನ ಅಂಶ ಆವಿಯಾಗಿ ಉಪ್ಪು ತಳದಲ್ಲಿ ಉಳಿಯುತ್ತದೆ. ಈ ರೀತಿ ತಯಾರಿಸಿದ ಉಪ್ಪು “ಹರಳು ಉಪ್ಪು” ಉಕ್ಕು ಅಥವಾ ಕಾಂಕ್ರೀಟಿನ ಬಾಣಲೆಗಳಲ್ಲಿ ಉಪ್ಪು ನೀರನ್ನು ತುಂಬಿ ನಿರ್ವಾತ ಉಂಟು ಮಾಡಿ, ಹೊರಗಿನಿಂದ ಉಗಿಯನ್ನು ಅಥವಾ ಬಿಸಿಗಾಳಿಯನ್ನು ಹಾಯಿಸಿ ಕಾಯಿಸುತ್ತಾರೆ. ಈ ರೀತಿ ತಯಾರಿಸಿದ ಉಪ್ಪು “ನಿರ್ವಾತ ಉಪ್ಪು”. ಇನ್ನೊಂದು ವಿಧಾನದಲ್ಲಿ ಅತಿ ಒತ್ತಡದಲ್ಲಿ ಉಪ್ಪು ನೀರನ್ನು ಕಾಯಿಸುತ್ತಾರೆ. ನೀರು ಆವಿಯಾದಂತೆ ಒತ್ತಡದ ಕೊಳವೆಗಳಲ್ಲಿ ಉಪ್ಪು ನೀರು ಹಾಯುತ್ತದೆ. ವಾತಾವರಣದ ಒತ್ತಡ ಹೊಂದಿರುವ ಕೊಳವೆಯನ್ನು ತಲುಪುವ ವೇಳೆಗೆ ನೀರಿನ ಅಂಶವೆಲ್ಲ ಆವಿಯಾಗಿ ಉಪ್ಪಿನ ಸ್ಪಟಿಕಗಳು ತಳದಲ್ಲಿ ತಂಗುತ್ತವೆ.
ಉಪ್ಪು ಅನೇಕ ರಾಸಾಯನಿಕ ಪದಾರ್ಥಗಳ ತಯಾರಿಕೆಗೆ ಅತ್ಯಗತ್ಯ. ಸೋಡಿಯಂ ಕಾರ್ಬೋನೇಟ್ (ವಾಷಿಂಗ್ ಸೋಡ) ಸೋಡಿಯಂ ಬೈ ಕಾರ್ಬೋನೇಟ್ (ಅಡುಗೆ ಸೋಡ) ಸೋಡಿಯಂ ಹೈಡ್ರಾಕ್ಸೈಡ್ (ಕಾಸ್ಟಿಕ್ ಸೋಡ) ಹೈಡ್ರೋಕ್ಲೋರಿಕ್ ಆಮ್ಲ, ಚೆಲುವೆ ಪುಡಿ, ಕ್ಲೋರಿನ್ ಅನಿಲಗಳ ತಯಾರಿಕೆಯಲ್ಲಿ ಉಪ್ಪು ಅನಿವಾರ್ಯ. ಗಾಜು, ಸಾಬೂನು ತಯಾರಿಕೆ, ಎನಾಮೆಲ್ ಲೇಪ ಕೊಡುವುದು ಮುಂತಾದ ಅನೇಕ ಉದ್ಯಮಗಳಲ್ಲಿ ಉಪ್ಪನ್ನು ಬಳಸುತ್ತಾರೆ. ಮಾಂಸ- ಮೀನುಗಳ ಸಂರಕ್ಷಣೆ ಮತ್ತು ಆಹಾರ ಪದಾರ್ಥಗಳ ಸಂರಕ್ಷಣೆಗಳಿಗೆ ಉಪ್ಪು ಬೇಕು. ಗಡಸು ನೀರನ್ನು ಮೆದುಗೊಳಿಸುವುದರಲ್ಲಿ ಉಪ್ಪು ನೆರವಾಗಬಲ್ಲದು. ಗಡಸು ನೀರನ್ನು ಹಾಯಿಸಲಾಗುವ ಧಾರಕದ ತಳದಲ್ಲಿ ಹಾಸಿರುವ ರಾಸಾಯನಿಕ ವಸ್ತುಗಳ ಮಿಶ್ರಣವು ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಅಂಶಗಳನ್ನು ಸೆಳೆದು ಸೋಡಿಯಂ ಅಂಶವನ್ನು ನೀರಿಗೆ ಬಿಟ್ಟುಕೊಡುತ್ತದೆ. ಆದ್ದರಿಂದ ಗಡಸು ನೀರು ಮೆದುವಾಗುತ್ತದೆ.
ಹಿಮ ಮತ್ತು ಮಂಜುಗಡ್ಡೆಗಳ ಜೊತೆ ಉಪ್ಪನ್ನು ಸೇರಿಸಿದರೆ ಅವುಗಳ ದ್ರವಿಸುವ ಬಿಂದುವನ್ನು ಉಪ್ಪು ಕಡಿಮೆಗೊಳಿಸುತ್ತದೆ. ಚಳಿಗಾಲದಲ್ಲಿ ಹಿಮ ಬಿದ್ದು ರಸ್ತೆಗಳನ್ನು ತುಂಬಿಕೊಂಡಾಗ ಶೀತವಲಯದ ದೇಶಗಳಲ್ಲಿ ಉಪ್ಪನ್ನು ಚಿಮುಕಿಸುತ್ತಾರೆ. ಆಗ ಹಿಮ ಕರಗಿ ಪ್ರಯಾಣಕ್ಕೆ ಅನುಕೂಲವಾಗುತ್ತದೆ. ಇದಕೋಸ್ಕರ ಪ್ರತಿದಿನ ಟನ್ ಗಟ್ಟಲೆ ಉಪ್ಪು ಖರ್ಚಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: