ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:
- ಸತೀಶ್ ಕಕ್ಕೆಪದವು
ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ– ಕಟದರು ಶೀರ್ಷಿಕೆಯಡಿಯಲ್ಲಿ ಅಸ್ಪೃಶ್ಯತೆ, ಅಸಮಾನತೆ, ದಬ್ಬಾಳಿಕೆ ಮೊದಲಾದವುಗಳ ವಿರುದ್ಧ ಸಿಡಿದೆದ್ದ ಅವಳಿ ವೀರರ ಜೀವನಗಾಥೆಯ ಬದುಕು ಬರಹಗಳತ್ತ ಸಾಗಿದಾಗ, ತುಳುನಾಡಿನ ಸಾಮಾಜಿಕ ಸಾಂಸ್ಕೃತಿಕ ಸ್ಥಿತಿಗತಿಗಳ ಅವಲೋಕನದ ಅನಿವಾರ್ಯ ಅವಶ್ಯಕತೆ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಬಾರ್ಕೂರಿನ ಅರಸರು, ನಂದಾವರದ ನವ ನಂದರು, ಇಟ್ಟೇಲ್ ಅರಸರು, ಬಂಗಾಡಿಯ ಬಂಗರಸರು, ಕುಂಬ್ಲೆಯರಸರು, ಕಾರ್ಲದ ಬೈರವರಸರು, ಬೆದ್ರದ ಚೌಟರಸರು, ಬೈಲಂಗಡಿಯರಸರು, ಅರುವ ವೇಣೂರಿನ ಅಜಿಲರಸರು, ಚಿಟ್ಪಾಡಿಯ ಬಲ್ಲಾಳರು…………. ಹೀಗೆ ಅನೇಕ ಆಳರಸರ ಮುಷ್ಠಿಯೊಳಗೆ ತುಳುನಾಡು ಆಳ್ವಿಕೆಗೆ ಒಳಪಟ್ಟಿರುವುದನ್ನು ಕಾಣಬಹುದಾಗಿದೆ. ಗುತ್ತು, ಬರ್ಕೆ, ಮಾಗನೆ, ಸೀಮೆಗಳೆಂಬ ಆಡಳಿತದ ವರ್ಗೀಕರಣವು ಸಾಮಾಜಿಕ ಸಾಂಸ್ಕೃತಿಕ ವ್ಯವಸ್ಥೆಗಳನ್ನು ಭದ್ರಪಡಿಸಿದೆ. ಬಂಟರು, ಗೌಡರು, ಬಿರುವರು, ಸಪಲಿಗರು, ದೇವಾಡಿಗರು, ಬ್ರಾಹ್ಮಣರು, ಕ್ರೈಸ್ತರು, ಮುಸಲ್ಮಾನರು, ಜೈನರು, ಗೌಡ ಸಾರಸ್ವತರು ಮೊದಲಾದ ಜಾತಿಗಳೊಂದಿಗೆ ಪರವ, ಪಂಬದ, ಬೈರ, ಬಾಕುಡ, ಮುಂಡಾಲ, ನಲಿಕೆ, ಮುಗೇರ, ಕೊರಗ, ಮನ್ಸ ಮೊದಲಾದವರನ್ನು ಒಳಗೊಂಡು “ತುಳುವರು” ಎಂಬುದಾಗಿ ಗುರುತಿಸಿಕೊಂಡು ಅನಾದಿ ಕಾಲದಿಂದಲೂ ಅಳಿಯಕಟ್ಟು – ಮಕ್ಕಳಕಟ್ಟು ಎಂಬ ಜಾತಿಯೊಳಗಿನ ಸಂಪ್ರದಾಯಿಕ ನಿಯಮಗಳನ್ನು ಪೋಷಿಸುತ್ತ ಬಂದಿರುವುದು ಅಗೋಚರ ಸತ್ಯವಾಗಿದ್ದಲ್ಲದೆ ಶ್ರೇಣೀಕೃತ ಸಮಾಜದ ಮೌಲ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವ ಚರಿತ್ರೆಯು ಕಾಣಸಿಗುತ್ತವೆ.
ಕಸುಬು ಆಧಾರಿತ ಜಾತಿ ವ್ಯವಸ್ಥೆಯು ಸೃಷ್ಟಿಯಾದಾಗಿನಿಂದಲೂ ನಿರ್ದಿಷ್ಟ ಕಾಯಕಕ್ಕೆ ಜೋತು ಬೀಳದೆ, ತಮ್ಮದೇ ಸ್ವಂತ ಬುದ್ಧಿಶಕ್ತಿ, ದೇಹ ಸಾಮರ್ಥ್ಯ, ಕೈಚಳಕ, ನೈಪುಣ್ಯತೆಗಳ ಮೂಲಕ ಯಾವುದೇ ಕೆಲಸವನ್ನು ಜವಾಬ್ದಾರಿಯುತವಾಗಿ ಪೂರ್ಣಪ್ರಮಾಣದಲ್ಲಿ ಅಂತಿಮತೆಗೊಳಿಸುವ ಯೋಗ್ಯತೆ, ಅರ್ಹತೆಯ ಕೀರ್ತಿಯೊಂದಿದ್ದರೆ, ಅದು ” ಮನ್ಸ ” ರಿಗೆ ಸಲ್ಲುತ್ತದೆ. ಇದರ ಹಿಂದಿರುವ ಗುಟ್ಟು ಏನೆಂದರೆ ಕಸುಬಿನ ಸೂಚಕವಾಗಿ ಮನ್ಸರು ಜಾತಿಯನ್ನು ಭದ್ರ ಪಡಿಸಿಕೊಂಡಿಲ್ಲ, ಬದಲಾಗಿ ಕಸುಬು ಆಧಾರಿತ ಜಾತಿ ವ್ಯವಸ್ಥೆಯನ್ನು ದಿಕ್ಕರಿಸಿ ನಾವು ಮಾನವರು, ನಾವು ಮನುಷ್ಯರು, ನಾವು ಮನ್ಸರು ಎಂಬುದಾಗಿ ಸ್ವಾಭಿಮಾನದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಅದೇ ಮನ್ಸರನ್ನು ನಿಷ್ಕೃಷ್ಟವಾಗಿ ಅತ್ಯಂತ ಕೀಳಾಗಿ ಸಂಬೋಧಿಸುವುದಲ್ಲದೆ ಗೌರವಯುತ ಪದ ಬಳಕೆಯು ಅಗೌರವದ ಮುಖ ಭಾವದ ಉಚ್ಚಾರಣೆಯು ಹಲವು ವರ್ಷಗಳ ಪ್ರಯತ್ನದ ರೂಪದಲ್ಲಿ ಪುನರಾವರ್ತಿತವಾಗಿ ಇಂದಿಗೂ ಚಾಲ್ತಿಯಲ್ಲಿದೆ ಎಂಬುದು ಕಣ್ಮುಂದೆ ಇರುವ ನಗ್ನಸತ್ಯ. ಕಾನದ– ಕಟದರ ಜೀವಮಾನವೂ ತಮ್ಮ ಜಾತಿಯ ಅಸ್ಮಿತೆಗಾಗಿ ಘನತೆ, ಗೌರವಕ್ಕಾಗಿ ಮುಗಿದು ಹೋಯಿತು ಎನ್ನುವ ಸೂಕ್ಷ್ಮತೆಯನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ. ಆದರೆ ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಸಂಘಟಿತರಾಗಿದ್ದ ಮನ್ಸ ಸಮುದಾಯವನ್ನು ಜಾತಿ ಸರ್ಟಿಫಿಕೇಟ್ ಗಳಲ್ಲಿ ಹೊಲೆಯ, ಹಸಲರು, ಪಾಲೆ, ತೋಟಿ, ಆದಿದ್ರಾವಿಡ, ಆದಿಕರ್ನಾಟಕ ಇತ್ಯಾದಿ ಜಾತಿಗಳನ್ನಾಗಿಸುವ ವ್ಯವಸ್ಥಿತ ವಿಭಜನೆಯ ಹುನ್ನಾರ ನಡೆದಿದೆ ಎಂದು ಹೇಳಬಹುದಾಗಿದೆ. ಬಾಬಾ ಸಾಹೇಬ್ ಡಾಕ್ಟರ್ ಭೀಮ್ ರಾವ್ ಅಂಬೇಡ್ಕರ್ ರವರ ಬರಹದಂತೆ ಜಾತಿ ಪ್ರಜ್ಞೆ ಬೆಳೆಸಿಕೊಳ್ಳದೆ ಹೋದರೆ ತಮ್ಮ ಜನಾಂಗದ ಸಂಸ್ಕೃತಿಯನ್ನು ಕಳೆದುಕೊಂಡು ತಮಗೆ ಸಂವಿಧಾನಾತ್ಮಕವಾಗಿ ಲಭಿಸುವ ಹಕ್ಕು ಅಧಿಕಾರವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯು ಬರುವ ಸಾಧ್ಯತೆಗಳ ಹತ್ತಿರದಲ್ಲಿದ್ದೇವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಇದರಿಂದಾಗಿ ನಮ್ಮ ಜನಾಂಗದ ಮುಂದಿನ ಪೀಳಿಗೆ ಎದುರಿಸಬೇಕಾಗುವ ದುರಂತ ಕಣ್ಣ ಮುಂದೆ ರಾಚುವಂತಿದೆ.
ಏನೇ ಇರಲಿ, ಈ ದೃಷ್ಠಿಯಿಂದ ಕಾನದ– ಕಟದರ ಜೀವನಗಾಥೆ ಅಸ್ಪೃಶ್ಯತೆ, ಅಸಮಾನತೆ, ದಬ್ಬಾಳಿಕೆ, ಊಳಿಗಮಾನ್ಯ ವ್ಯವಸ್ಥೆಗಳ ವಿರುದ್ಧವೇ ಆಗಿದ್ದು, ಸಮಾಜ ಪರಿವರ್ತನಾ ಚಳುವಳಿಯ ನಾಯಕರ ಸಾಲಿನಲ್ಲಿ ವೀರರಾದ ಕಾನದ-ಕಟದರನ್ನು ಕಾಣಬೇಕಾದ ತುರ್ತು ಬಹಳಷ್ಟಿದೆ. ತುಳುನಾಡಿನ ಇತಿಹಾಸದಲ್ಲಿ ಜಾತಿ ಬಿಟ್ಟು ಕಾನದ-ಕಟದರ ಹೋರಾಟ ನಡೆದಿಲ್ಲ. ಜಾತಿಗಾಗುವ ಅವಮಾನ, ಜಾತಿಗಾಗುವ ಅಪಮಾನ, ಜಾತಿಗಾಗುವ ದಬ್ಬಾಳಿಕೆ, ಜಾತಿಗಾಗುವ ತುಳಿತ ಮೊದಲಾದವುಗಳ ವಿರುದ್ಧ ಧ್ವನಿಯೆತ್ತಿದರು, ಸವಾಲು ಒಡ್ಡಿದರು, ಸಿಡಿಲಮರಿಗಳಾದರು, ಜಾತಿಗಂಟಿದ ತುಚ್ಚ ಭಾವವನ್ನು ಸರಿಪಡಿಸಲು ಹೋರಾಡಿದರು. ಹೋರಾಡುತ್ತಲೇ ಮೋಸಕ್ಕೆ ಬಲಿಯಾದರು, ಅಮರರಾದರು.
ಸಾಧಕರಾದ ಕಾನದ-ಕಟದರ ಅಭಿಮಾನಿಗಳಾಗದೆ, ಅನುಯಾಯಿಗಳಾಗ ಬೇಕಾದುದು ಅತ್ಯವಶ್ಯಕವಾಗಿದೆ. ಅಭಿಮಾನಿಗಳು ಬಾವುಕರಾಗಿ ಕಾನದ– ಕಟದರನ್ನು ಆರಾಧನಾ ಪ್ರಕ್ರಿಯೆಗೆ ರೂಪುರೇಷೆ ಹಾಕಲು ಯೋಚಿಸ ಬಹುದಾಗಿದೆ. ಈ ಆರಾಧನೆಯ ಭಾವುಕ ಪ್ರಕ್ರಿಯೆಯೊಳಗೆ ಅನಾಯಾಸವಾಗಿ ಅರಿವಿಲ್ಲದಂತೆ ಮೌಡ್ಯತೆಯ, ಊಳಿಗದ ಜಾತಿ ಶ್ರೇಣಿಕರಣದ ಕೂಪಕ್ಕೆ ಮತ್ತೆ ತಳ್ಳುವ ಅಪಾಯದ ಸೂಚನೆಯಿದೆ !
ಆದರೆ ಅನುಯಾಯಿಗಳು ಕಾನದ-ಕಟದರ ನುಡಿಯನ್ನು ಜೀರ್ಣಿಸಿಕೊಂಡು ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆ, ದಬ್ಬಾಳಿಕೆ, ಊಳಿಗಮಾನ್ಯ ವ್ಯವಸ್ಥೆಗಳ ವಿರುದ್ಧ ಧ್ವನಿಗಳಾಗುತ್ತಾರೆ. ಸಾರಮಾನ್ಯರಾದ ಕಾನದ ಕಟದ ಸತ್ಯಗಳ ಸತ್ಯ ನುಡಿಗಳನ್ನು ಉಳಿಸಿ ಬೆಳೆಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಎಲ್ಲಾ ಜಾತಿ ಜನಾಂಗಗಳ ಸಾಮಾಜಿಕ ಅನುಸಂಧಾನ ಪ್ರಕ್ರಿಯೆಗೆ ಮುಂದಾಗುತ್ತಾರೆ.ಆದ ಕಾರಣದಿಂದಾಗಿಯೇ ಜಾತಿ ವ್ಯವಸ್ಥೆ ಬೆಂಬಿಡದ ನೆರಳಿನಂತೆ ಹಾಗು ಕಾನದ– ಕಟದರ ಜೀವನಗಾಥೆ ಜೊತೆ ಜೊತೆಯಲ್ಲಿ ಸಾಗಬೇಕಾಗಿದೆ.
ಜಗತ್ಪ್ರಸಿದ್ಧ ಜೈನ ಕಾಶಿ ಮೂಡು ಬಿದರೆ ( ದಕ್ಷಿಣ ಕನ್ನಡ ಜಿಲ್ಲೆಯ ಬಿದಿರಿನ ನಾಡು ಮೂಡುಬಿದಿರೆ ) ಯಲ್ಲಿ ಜೈನ ಕವಿ ರತ್ನಾಕರವರ್ಣಿಯ ಜನನ, ಹದಿನೆಂಟು ಕೆರೆಗಳು, ಹದಿನೆಂಟು ಬಸದಿಗಳು, ಹದಿನೆಂಟು ದೇವಾಲಯಗಳು, ಅಂಕಸಾಲೆ, ಆಲಡೆ, ಚೌಟರಮನೆ, ಕಳರಿಗರಡಿ, ಗುಡಿ ಮಾಡಗಳು, ಕಡ್ಲೆಕೆರೆ ಕಂಬಳ, ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆಗಳು ಇತ್ಯಾದಿ ಗಳಿಂದಾಗಿ ವಿಶ್ವ ವಿಖ್ಯಾತವಾಗಲು ಕಾರಣೀಭೂತವಾಗಿದ್ದರೂ ಅದೇ ಮೂಡುಬಿದಿರೆಯ ಪ್ರಾಂತ್ಯ ಗ್ರಾಮದ ಇಟ್ಟೆಕೊಪ್ಪ ಪೆರಿಯ ಮಂಜದ ಇತಿಹಾಸವು ಮಸುಕಿನ ಮರೆಯಲ್ಲಿ ಸಿಲುಕಿ ನಾಶದ ಅಂಚಿನಲ್ಲಿದೆ ಎಂಬುದು ಗಮನೀಯ ಸಂಗತಿಯಾಗಿದೆ.
( ಮುಂದಿನ ಸಂಚಿಕೆಯಲ್ಲಿ ಸತ್ಯದಪ್ಪೆ ಬೊಲ್ಲೆಯ ಜನ್ಮ ವೃತ್ತಾಂತ…….)
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb