18 ವರ್ಷಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಕುಟುಂಬದ ಕಣ್ಣೀರಿನ ಕಥೆ! - Mahanayaka
8:07 PM Wednesday 11 - December 2024

18 ವರ್ಷಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಕುಟುಂಬದ ಕಣ್ಣೀರಿನ ಕಥೆ!

kannuru hiv
26/05/2021

ಕೊಟ್ಟಿಯೂರ್(ಕಣ್ಣೂರು):  ಎಚ್ ಐವಿ ಸೋಂಕಿತನ ಕುಟುಂಬವೊಂದು 18 ವರ್ಷಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿರುವ ಘಟನೆ ಕೇರಳದ ಕೊಟ್ಟಿಯೂರ್ ಅಂಬಲಕ್ಕುನ್ನು  ಬಳಿಯ ಕೊಟ್ಟಮ್ವಿರದಲ್ಲಿ ನಡೆದಿದೆ.

ರೆಮಾ ಮತ್ತು ಅವರ ಮೂವರು ಮಕ್ಕಳು ಕಳೆದ 18 ವರ್ಷಗಳಲ್ಲಿ ಕಣ್ಣೀರಿನಲ್ಲಿಯೇ ಕೈತೊಳೆದಿದ್ದು, ಎಚ್ ಐವಿ ಸೋಂಕಿತನ ಕುಟುಂಬ ಎಂದು ಪ್ರತಿ ಹಂತದಲ್ಲಿಯೂ ಅವರನ್ನು ಸಮಾಜದಿಂದ ಹೊರಗಿಡಲಾಗಿದೆ. ಉನ್ನತ ವಿದ್ಯಾಭ್ಯಾವನ್ನು ಪಡೆದಿದ್ದರೂ ಉದ್ಯೋಗ ನೀಡದೇ ಕುಟುಂಬವನ್ನು ಸತಾಯಿಸಲಾಗಿದೆ ಇದೀಗ ಅವರು ಕೇರಳ ಮುಖ್ಯಮಂತ್ರಿಯ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ರೆಮಾ ಅವರ ಪತಿ ಶಾಜಿ ಎಂಬವರು ಎಚ್ ಐವಿ ಸೋಂಕಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಇಡೀಗ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿತ್ತು.  2004ರಿಂದ 2021ರವರೆಗೂ ಇವರ ಕುಟುಂಬ ಈ ಬಹಿಷ್ಕಾರದಿಂದ ಹೊರ ಬರಲು ಸತತ ಪ್ರಯತ್ನಗಳನ್ನು ನಡೆಸಿಯೂ ವಿಫಲವಾಗಿದೆ.

ರೆಮಾ ಅವರ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗಿತ್ತು. ಆದರೆ, ಈ ಎಲ್ಲಅಡೆತಡೆಗಳನ್ನು ಮೀರಿ, ಇವರ ಪುತ್ರ  ಅನಂತು ಬಿಎಸ್ಸಿ ಸೈಕಾಲಜಿಯಲ್ಲಿ ಪದವಿ ಮಾಡಿದ್ದಾರೆ. ಇವರ ಮಗಳು ಅತಿರಾ ಎಂ.ಟೆಕ್ ಮಾಡಿದ್ದು, ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಲೋತರ ಪದವಿಯನ್ನೂ ಮಾಡಿದ್ದಾರೆ.

ಇಬ್ಬರು ಮಕ್ಕಳು ಕೂಡ ವಿದ್ಯಾರ್ಹತೆ  ಹಾಗೂ ಉದ್ಯೋಗಾರ್ಹತೆ ಇದ್ದರೂ ಕೂಡ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಕಂಪೆನಿಗಳು ಕೂಡ ಹಿಂದೇಟು ಹಾಕಿವೆ.  ಅತಿರಾ ಅವರು ಎರ್ನಾಕುಲಂನ ಖಾಸಗಿ ಕಂಪೆನಿಯೊಂದಕ್ಕೆ ಸಂದರ್ಶನಕ್ಕೆ ತೆರಳಿದ್ದು, ಆಯ್ಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಅವರನ್ನು ಅಂತಿಮವಾಗಿ ಪಟ್ಟಿಯಿಂದ ಯಾವುದೇ ಕಾರಣಗಳನ್ನೂ ಹೇಳದೇ ಹೊರಗಿಡಲಾಯಿತು. ಹೀಗೆ ಅನೇಕ ಸ್ಥಳಗಳಲ್ಲಿ ಮಾಡದ ತಪ್ಪಿಗೆ ಇವರು ಶಿಕ್ಷೆ ಅನುಭವಿಸಿದ್ದಾರೆ.

ಎಚ್ ಐವಿ ಸಂತ್ರಸ್ತರ ಕುಟುಂಬದವರು ಎನ್ನುವ ಕಾರಣಕ್ಕೆ ನಮ್ಮನ್ನು ಪ್ರತಿ ಹಂತದಲ್ಲಿಯೂ ದೂರ ಇಡಲಾಗಿದೆ ಎಂದು ಈ ಕುಟುಂಬ ನೋವು ಹಂಚಿಕೊಂಡಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ