ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಕ್ಕೆ ಕೊಲೆ ಮಾಡಿದ ಗ್ರಾ.ಪಂ.ಅಧ್ಯಕ್ಷ!
ಉಡುಪಿ: ಗ್ರಾಮ ಪಂಚಾಯತ್ ನ ಆಡಳಿತಕ್ಕೆ ಸಂಬಂಧಿಸಿದಂತೆ ಟೀಕೆಗಳನ್ನು ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕಾರು ಹರಿಸಿ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾ.ಪಂ. ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ತಾಲೂಕು ವ್ಯಾಪ್ತಿಯ ಯಡಮೊಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಹತ್ಯೆ ಆರೋಪಿಯಾಗಿದ್ದು, ಉದಯ ಗಾಣಿಗ ಹತ್ಯೆಗೀಡಾದವರಾಗಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಗ್ರಾಮ ಪಂಚಾಯತ್ ಲಾಕ್ ಡೌನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಟೇಟಸ್ ಹಾಕಿದ್ದ ಉದಯ ಗಾಣಿಗ, ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ, ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ, ಕೊರೊನಾ ಪೀಡಿತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ, ಆಮೇಲೆ ಪ್ರಚಾರ ತೆಗೆದುಕೊಳ್ಳಿ. ಸರ್ಕಾರದ ಸಹಾಯ ಧನ ನುಂಗಬೇಡಿ ಎಂದು ಖಾರವಾಗಿ ಗ್ರಾಮ ಪಂಚಾಯತ್ ನ್ನು ತರಾಟೆಗೆತ್ತಿಕೊಂಡಿದ್ದರು ಎಂದು ಹೇಳಲಾಗಿದೆ.
ಇದಾದ ಬಳಿಕ ಯಡಮೊಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ರಸ್ತೆ ಬದಿಯಲ್ಲಿ ಬೈಕ್ ನಲ್ಲಿ ನಿಂತಿದ್ದ ಉದಯ ಗಾಣಿಗ ಅವರನ್ನು ಕಂಡ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಏಕಾಏಕಿ ತಮ್ಮ ಕಾರನ್ನು ಉದಯ್ ಮೇಲೆ ಹರಿಸಿದ್ದು, ಇದರಿಂದಾಗಿ ಉದಯ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದರು.
ಇತ್ತ ಅಪಘಾತದ ಬಳಿಕ ಆರೋಪಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಾಣೇಶ್ ಪರಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಇದೊಂದು ಉದ್ದೇಶ ಪೂರ್ವಕ ಘಟನೆ ಎಂದು ಅನುಮಾನ ವ್ಯಕ್ತವಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.