ರಾಜ್ಯದ ಸಂಸದರೆಲ್ಲಾ ಬಾಯಿಗೆ ಪ್ಲಾಸ್ಟರ್ ಹಾಕಿ ಕೂತಿದ್ದಾರೆ: ಯು.ಟಿ.ಖಾದರ್ ಕಿಡಿ
ಮಂಗಳೂರು: ಕೇಂದ್ರ ಸರ್ಕಾರ ಜಿಎಸ್ಟಿಯಲ್ಲಿ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯ ಮಾಡಿದೆ. ಆದರೂ ರಾಜ್ಯದ ಸಂಸದರೆಲ್ಲಾ ಬಾಯಿಗೆ ಪ್ಲಾಸ್ಟರ್ ಹಾಕಿ ಕೂತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ತಿನ್ನುವ ಆಹಾರ, ಬಳಸುವ ಪೆನ್ನು, ಪೆನ್ಸಿಲ್ ಗೂ ತೆರಿಗೆ ಹಾಕಿದೆ. ಅಕ್ಕಿಗೆ ಬೇರೆ ಮಂಡಕ್ಕಿಗೆ ಬೇರೆ ತೆರಿಗೆ ಹಾಕಿದೆ. ತಿನ್ನುವ ಆಹಾರನ್ನೂ ಬಿಡದೇ ತೆರಿಗೆ ಹಾಕಿರುವ ಕೇಂದ್ರ ಸರ್ಕಾರ ಒಂದೇ ಒಂದು ಜನೋಪಯೊಗಿ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಸರಕಾರವನ್ನು ಜರಿದರು.
ಶ್ರೀಮಂತರ ಮೇಲಿನ ಕಾರ್ಪೊರೇಟ್ ಟಾಕ್ಸ್ ಮಾತ್ರ ಕಡಿಮೆ ಮಾಡಿರುವ ಸರ್ಕಾರ, ಬಡವರು ಬಳಸುವ ವಸ್ತುಗಳಿಗೆ ತೆರಿಗೆ ಹೆಚ್ಚಳಮಾಡಿ ಜನರನ್ನು ಲೂಟಿ ಮಾಡಿ ತನ್ನ ಖಜಾನೆ ತುಂಬಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಎಲ್ಲದ್ದಕ್ಕೂ ಟಾಕ್ಸ್ ಹಾಕಿ ಆಯಿತು, ಇನ್ನು ಶವ ಎತ್ತಿಕೊಂಡು ಹೋಗುವುದಕ್ಕೂ ಟಾಕ್ಸ್ ಹಾಕದಿದ್ದರೆ ಸಾಕು ಎಂದು ತಮಾಷೆಯಾಗಿ ಕುಟುಕಿದರು.
ಅಕ್ಕಿ, ಗೋಧಿ, ಬೆಲ್ಲ, ಜೇನುತುಪ್ಪ, ಪೆನ್ಸಿಲ್ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಾಕುವ ಮೂಲಕ ಬಿಜೆಪಿ ಸರಕಾರ ಜನರನ್ನು ಲೂಟಿ ಮಾಡಿ ಖಜಾನೆ ತುಂಬಿಸುವ ಯತ್ನ ನಡೆಸುತ್ತಿದೆ. ಸರಕಾರ ನಡೆಸಲು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಲಾಗಿದೆ. ಅದನ್ನು ನಿಭಾಯಿಸುವ ಸಾಮರ್ಥ್ಯ ಇಲ್ಲದ ಬಿಜೆಪಿ ಸರಕಾರ ಜನರ ಮೇಲೆ ಜಿಎಸ್ ಟಿ ರೂಪದಲ್ಲಿ ಹೊರೆ ಹಾಕುತ್ತಿದೆ. ಜಿಎಸ್ ಟಿ ಹಣ ಮತ್ತೆ ಸಿಗುತ್ತದೆ ಎನ್ನುವುದಾದರೆ ಹಾಕುವುದು ಯಾಕೆ? ಅಡುಗೆ ಅನಿಲಕ್ಕೆ 400 ರೂ.ಗಳಿದ್ದಾಗ ಸಬ್ಸಿಡಿ ದೊರೆಯುತ್ತಿತ್ತು. ಈಗ 1,000 ರೂ. ಮೀರಿದರೂ ಸಬ್ಸಿಡಿ ದೊರೆಯುತ್ತಿಲ್ಲ. ಜನರ ಕಷ್ಟ ಸರಕಾರಕ್ಕೆ ಅರ್ಥವಾಗುತ್ತಿಲ್ಲ.ಸರಕಾರ ಏನು ಮಾಡುತ್ತಿದೆ ಎಂದು ಜನರಿಗೆ ಅರ್ಥವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜಿಎಸ್ ಟಿ ಜಾರಿಗೆ ತರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸಿದ್ದರು. ಆವಾಗ ಅವರನ್ನೇ ಅಪಹಾಸ್ಯ ಮಾಡಲಾಯಿತು.ಇದೀಗ ಜನರ ಮೇಲೆ ತೆರಿಗೆ ಹೊರೆ ಹಾಕುವ ಸರಕಾರ ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿದ್ದರ ಹಿಂದಿನ ಲಾಜಿಕ್ ಏನೆಂದು ಅರ್ಥವಾಗುತ್ತಿಲ್ಲ.ಜಿಎಸ್‌ಟಿ ಉತ್ತಮ ನೀತಿಯಾಗಿದ್ದರೂ ಬಿಜೆಪಿ ಅದನ್ನು ಅತ್ಯಂತ ಕೆಟ್ಟದಾಗಿ ಜಾರಿಗೊಳಿಸುತ್ತಿದೆ ಎಂದರು.
ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಾಕುವ ಜತೆಯಲ್ಲೇ 1000 ರೂ.ವರೆಗಿನ ಹೊಟೇಲ್ ರೂಂ ಮೇಲೂ,ಸೋಲಾರ್, ಎಲ್ ಇಡಿ ಮೊದಲಾದವುಗಳ ಮೇಲೂ ತೆರಿಗೆ ಹಾಕುವ ಮೂಲಕ ಸರಕಾರ ಮಾನವೀಯತೆ,ಅನುಕಂಪವೆಂಬುದನ್ನೇ ಮರೆತಂತಿದೆ. ಇದರಿಂದ ವ್ಯವಹಾರಸ್ಥರಿಗೆ ಯಾವುದೇ ತೊಂದರೆ ಆಗದಿದ್ದರೂ ಸಾಮಾನ್ಯ ಗ್ರಾಹಕರು ಹೊರೆ ಅನುಭವಿಸಬೇಕಾಗಿದೆ. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಜನರ ವೇತನ,ಆದಾಯದಲ್ಲಿ ಹೆಚ್ಚಿನ ಏರಿಕೆಯಾಗದಿದ್ದರೂ ಈ ರೀತಿಯ ತೆರಿಗೆ ಹೊರೆಯಿಂದ ಜೀವನ ಸಾಗಿಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಇದನ್ನು ಖಂಡಿಸುವುದಲ್ಲದೆ, ಶೀಘ್ರದಲ್ಲೇ ತೀವ್ರ ರೀತಿಯ ಹೋರಾಟವನ್ನು ರೂಪಿಸಲಿದೆ.
ಜಿಎಸ್‌ಟಿ ಅನುದಾನದಲ್ಲಿಯೂ ರಾಜ್ಯಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡಿದೆ. ದೇಶದಲ್ಲಿ ಕರ್ನಾಟಕ ಅತ್ಯಧಿಕ ತೆರಿಗೆ ಪಾವತಿದಾರರ ೨ನೆ ಸ್ಥಾನದಲ್ಲಿ ಗುರುತಿಸಿಕೊಂಡಿದೆ.ಹಾಗಿದ್ದರೂ ಜಿಎಸ್‌ಟಿ ಪಾಲು ರಾಜ್ಯಕ್ಕೆ ದೊರಕಿದ್ದು 1,26,000 ಕೋಟಿ ರೂ. ವಾಸ್ತವದಲ್ಲಿ ಅದು 19.50 ಲಕ್ಷ ಕೋಟಿ ರೂ.ಗಳಾಗಬೇಕಿದೆ. ಇದನ್ನು ಪ್ರಶ್ನಿಸಬೇಕಾದ ನಮ್ಮ ರಾಜ್ಯದ 25 ಮಂದಿ ಸದಸ್ಯರು ಬಾಯಿಗೆ ಪ್ಲಾಸ್ಟರ್ ಹಾಕಿ ಕುಳಿತಿದ್ದಾರೆ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ಅನ್ಯಾಯ ಆದಾಗ ಪ್ರತಿಪಕ್ಷ ಧ್ವನಿ ಎತ್ತಬೇಕಾಗುತ್ತದೆ. ಆದರೆ ಪ್ರಸಕ್ತ ಬಿಜೆಪಿ ಆಡಳಿತದ ಸರಕಾರದಲ್ಲಿ ಪ್ರತಿಪಕ್ಷದ ಧ್ವನಿಯನ್ನು ದಮನ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಸರಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಆರ್ಥಿಕ ಸಂಕಷ್ಟದ ಬಗ್ಗೆ ಬಸ್ಸು ಮಾಲಕರು, ರಿಕ್ಷಾ ಚಾಲಕರು ಎಲ್ಲರೂ ಮಾತನಾಡುತ್ತಾರೆ. ಆದರೆ ಪ್ರತಿಭಟನೆಗೆ ಕೈಜೋಡಿಸಲು ಹೇಳಿದರೆ ಹಿಂದೇಟು ಹಾಕುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮೇಲೆ ಸವಾರಿ ಮಾಡುತ್ತಿರುವ ಸರಕಾರದ ನಡೆಗೆ ಜನರ ಮೌನವೂ ಒಂದು ಕಾರಣ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧದ ಇಡಿ ನೋಟೀಸು ಕುರಿತಂತೆ ರಾಜ್ಯ ಮಟ್ಟದಲ್ಲಿ ಜು. 21ರಂದು ಮತ್ತು ಜಿಲ್ಲಾ ಮಟ್ಟದಲ್ಲಿ ಜು. 25ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ತನ್ನ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದ ನಾಯಕಿಯೊಬ್ಬರ ಮೇಲೆ ಯಾವುದೇ ಕಾರಣವಿಲ್ಲದೆ ಇಡಿ ನೋಟೀಸು ನೀಡುತ್ತಿರುವುದು ರಾಜಕೀಯ ದ್ವೇಷ ಅಲ್ಲದೆ ಮತ್ತೇನು ? 2015ರಲ್ಲಿ ಅಂತಿಮಗೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿ ಮತ್ತೆ ವಿಚಾರಣೆಗೆ ನೋಟೀಸು ನೀಡಿರುವ ಕುರಿತಂತೆ ಯಾವ ಠಾಣೆಯಲ್ಲಿ ಯಾರು ಮತ್ತೆ ಯಾವ ದೂರು ನೀಡಿದ್ದಾರೆ ಎಂಬ ಕುರಿತಾದ ಎಫ್ ಐಆರ್ ಪ್ರತಿ ಒದಗಿಸಲಿ ಎಂದು ಖಾದರ್ ಕಿಡಿಕಾರಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka