12 ಸಾವಿರ ವಿದ್ಯಾರ್ಥಿಗಳಿಗೆ ‘ಸಂವಿಧಾನ ಓದಿ’ ಪುಸ್ತಕ ವಿತರಿಸಲಿರುವ ಸಂಸದ ಶ್ರೀನಿವಾಸ್ ಪ್ರಸಾದ್
ಬೆಂಗಳೂರು: ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಅವರು, ತಮ್ಮ ಕ್ಷೇತ್ರದ ಪದವಿ ಪೂರ್ವ ಕಾಲೇಜಿನ ಸುಮಾರು 12 ಸಾವಿರ ವಿದ್ಯಾರ್ಥಿಗಳಿಗೆ ‘ಸಂವಿಧಾನ ಓದಿ’ ಎಂಬ ಪುಸ್ತಕ ವಿತರಿಸಲಿದ್ದಾರೆ.
ಸಂಸದರ ನಿಧಿಯ ಮೂಲಕ ಈ ಮಹತ್ವದ ಕಾರ್ಯಕ್ಕೆ ಶ್ರೀನಿವಾಸ್ ಪ್ರಸಾದ್ ಅವರು ಮುಂದಾಗಿದ್ದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಂವಿಧಾನದ ಪುಸ್ತಕದ ಬಗ್ಗೆ ನಾನು ಪ್ರಭಾವಿತನಾಗಿದ್ದು, ಈ ಪುಸ್ತಕವನ್ನು ಸರಳ ಭಾಷೆಯಲ್ಲಿ ಬರೆಯಲಾಗಿದೆ. ವಿದ್ಯಾರ್ಥಿಗಳಿದೆ ಸುಲಭವಾಗಿ ಅರ್ಥವಾಗುತ್ತದೆ. ಈ ಪುಸ್ತಕವನ್ನು ಮುದ್ರಿಸಲು ಮತ್ತು ವಿದ್ಯಾರ್ಥಿಗಳಿಗೆ ವಿತರಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅನುಮತಿ ಕೇಳಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಈ ಹಿಂದಿನಿಂದಲೂ ಶ್ರೀನಿವಾಸ್ ಪ್ರಸಾದ್ ಅವರು, ತಾಲ್ಲೂಕುಗಳಲ್ಲೂ ಅತ್ಯುತ್ತಮ ಮೂಲಸೌಕರ್ಯ, ಓದುವ ಕೋಣೆ ಮತ್ತು ಗ್ರಂಥಾಲಯ ಹೊಂದಿದ ಅಂಬೇಡ್ಕರ್ ಭವನಗಳ ನಿರ್ಮಾಣ ಮೊದಲಾದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಈ ಬಾರಿ ಸಂವಿಧಾನದ ಮಹತ್ವ ತಿಳಿಸುವ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಹಂಚಲಿದ್ದಾರೆ.