ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸುವವರಿಗೆ ಪೊಲೀಸರು ಕೊಡಲಿದ್ದಾರೆ ಈ ಉಡುಗೊರೆ!
ಬೆಂಗಳೂರು: ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವವರಿಗೆ ಪೊಲೀಸರು ಉಡುಗೊರೆಯೊಂದನ್ನು ನೀಡಲು ಮುಂದಾಗಿದ್ದು, ಸಂಚಾರಿ ನಿಯಮಗಳನ್ನು ಪಾಲಿಸಲು ವಾಹನ ಸವಾರರಿಗೆ ಪ್ರೇರಣೆ ನೀಡಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಸಂಚಾರಿ ನಿಯಮಗಳನ್ನು ಬ್ರೇಕ್ ಮಾಡದ ಸವಾರರಿಗೆ ವಾಹನ ವಿಮೆಯನ್ನು ತಗ್ಗಿಸಲು ಇನ್ಶೂರೆನ್ಸ್ ಕಂಪೆನಿಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಹೆಚ್ಚಳವಾಗುತ್ತಿರುವ ಅಪಘಾತ ಸಂಖ್ಯೆ ತಗ್ಗಿಸಲು ಹಾಗೂ ನಿಯಮ ಉಲ್ಲಂಘನೆ ಪ್ರಮಾಣ ಕಡಿಮೆ ಮಾಡಲು ಸಂಚಾರಿ ಪೊಲೀಸರು ಪಣತೊಟ್ಟಿದ್ದು, ಹೆಚ್ಚು ನಿಯಮ ಉಲ್ಲಂಘಿಸಿದವರಿಗೆ ಹೆಚ್ಚು ಪ್ರೀಮಿಯಂ ಹಾಗೂ ಕಡಿಮೆ ಉಲ್ಲಂಘನೆ ಮಾಡಿದವರಿಗೆ ಕಡಿಮೆ ಪ್ರೀಮಿಯಂ ವಿಧಿಸುವ ಹಾಗೆಯೇ ವಿಮಾ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ವಾಹನ ಸವಾರರಿಗೆ ಇನ್ಯೂರೆನ್ಸ್ ಒಂದು ವರ್ಷಕ್ಕೆ ಪಾವತಿಸಿದರೆ, ಅಂತಹವರಿಗೆ ಎರಡು ಅಥವಾ ಮೂರು ವರ್ಷಗಳ ಕಾಲ ವಿಮಾ ಅವಧಿ ವಿಸ್ತರಣೆ ಕುರಿತಂತೆ ಚಿಂತನೆ ನಡೆಸಲಾಗುತ್ತದೆ ಎಂದು ಎಂದು ರವಿಕಾಂತೇಗೌಡ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಈ ಬಗ್ಗೆ ಕಂಪೆನಿಗಳ ಜೊತೆಗೆ ಒಂದು ಹಂತದ ಮಾತುಕತೆ ನಡೆಸಲಾಗಿದ್ದು, ಅಂತಿಮವಾದ ಬಳಿಕ ನಿಯಮ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.