ಸಂಚಾರಿ ವಿಜಯ್ ಅಂಗಾಂಗ ದಾನಕ್ಕೆ ಮುಂದಾದ ಕುಟುಂಬಸ್ಥರು!
ಬೆಂಗಳೂರು: ಮೆದುಳಿಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಸಂಚಾರಿ ವಿಜಯ್ ಬದುಕುವ ಸಾಧ್ಯತೆ ಕಡಿಮೆ ಇದ್ದು, ಅವರ ಮೆದುಳು ಹಂತ ಹಂತವಾಗಿ ನಿಷ್ಕ್ರಿಯವಾಗುತ್ತಿದೆ. ಹೀಗಾಗಿ ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿರುವುದಾಗಿ ನಟ ಸಂಚಾರಿ ವಿಜಯ್ ಸಹೋದರ ಸಿದ್ಧೇಶ್ ತಿಳಿಸಿದ್ದಾರೆ.
ಶನಿವಾರ ರಾತ್ರಿ ಗೆಳೆಯ ನವೀನ್ ಜೊತೆಗೆ ಬೈಕ್ ನಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಅಪಘಾತಗೊಂಡಿದ್ದರು. ತಲೆಗೆ ತೀವ್ರವಾಗಿ ಏಟು ಬಿದ್ದಿದ್ದುದರಿಂದ ಅವರ ಮೆದುಳಿಗೆ ತೀವ್ರವಾದ ಏಟು ಬಿದ್ದಿತ್ತು.
ಐಸಿಯುನಲ್ಲಿ ಇಂದು ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ, ಬ್ರೈನ್ ಸ್ಟ್ರೋಕ್ ಉಂಟಾಗಿ, ಅವರು ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದ್ದರು. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬುದಾಗಿಯೂ ಅಪೋಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯ್ಕ್ ಮಾಹಿತಿ ನೀಡಿದ್ದರು.
ನಟ ಸಂಚಾರಿ ವಿಜಯ್ ಚಿಕಿತ್ಸೆಗೆ ಸ್ಪಂದಿಸದ ಕಾರಣ, ಗಂಭೀರ ಸ್ಥಿತಿಯನ್ನು ತಲುಪಿದ್ದ ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಟ ನೀನಾಸಂ ಸತೀಶ್ ನೆನೆದು ಕಣ್ಣೀರಿಟ್ಟರು. ಅಲ್ಲದೇ ಅವರ ಕುಟುಂಬಸ್ಥರು ನಟ ಸಂಚಾರಿ ವಿಜಯ್ ಅಂಗಾಗ ದಾನ ಮಾಡುವಂತ ನಿರ್ಧಾರವನ್ನು ಕೈಗೊಂಡಿರೋದಾಗಿ ಪ್ರಕಟಿಸಿದ್ದಾರೆ.