48 ಗಂಟೆಗಳ ಕಾಲ ಸಂಚಾರಿ ವಿಜಯ್ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ ಎಂದ ವೈದ್ಯರು
ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ, ಸಂಚಾರಿ ವಿಜಯ್ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಜೊತೆಗೆ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಮುಂದಿನ 48 ಗಂಟೆಗಳ ವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ನಟ ವಿಜಯ್ ತಮ್ಮ ಸ್ನೇಹಿತರ ಜೊತೆ ಸೇರಿ ಫುಡ್ ಕಿಟ್ ವಿತರಣೆ ಮಾಡುತ್ತಿದ್ದರು. ಫುಡ್ ಕಿಟ್ ವಿತರಣೆಯ ಬಳಿಕ ಅವರು ತಮ್ಮ ಬೈಕ್ ನಲ್ಲಿ ಹಿಂಬದಿ ಸವಾರನಾಗಿ ಬರುತ್ತಿದ್ದರು. ಈ ವೇಳೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.
ಅಪಘಾತದಿಂದಾಗಿ ಅವರ ಮೆದುಳಿನ ಬಲಭಾಗಕ್ಕೆ ಗಾಯವಾಗಿದ್ದು, ಹಾಗಾಗಿ ತೀವ್ರವಾದ ರಕ್ತ ಸ್ರಾವವಾಗುತ್ತಿದೆ. ಈಗಾಗಲೇ ಶಸ್ತ್ರ ಚಿಕಿತ್ಸೆ ನಡೆಸಿರುವ ವೈದ್ಯರು 48 ಗಂಟೆಗಳ ಕಾಲ ನಾವು ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಟ ಹಾಗೂ ಬರಹಗಾರರಾಗಿರುವ ಸಂಚಾರಿ ವಿಜಯ್ ಅವರು “ನಾನು ಅವನಲ್ಲ, ಅವಳು” ಎನ್ನುವ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಈ ಚಿತ್ರದಲ್ಲಿ ಅವರು ತೃತೀಯ ಲಿಂಗಿ ಪಾತ್ರವನ್ನು ನಿರ್ವಹಿಸಿದ್ದು, ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಸ್ನೇಹ ಜೀವಿಯಾಗಿದ್ದ ಸಂಚಾರಿ ವಿಜಯ್ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಿದ್ದರು. ಅವರಿಗೆ ಅವರದ್ದೇ ಆದ ಸ್ನೇಹಿತ ಬಳಗ ಕೂಡ ಇದೆ. ಜನರ ಸಂಕಷ್ಟಕ್ಕೆ ನೆರವು ನೀಡಿ ಬರುತ್ತಿದ್ದ ವೇಳೆ ಅವರು ಇಂತಹದ್ದೊಂದು ಅಪಘಾತಕ್ಕೆ ಸಿಲುಕಿದ್ದಾರೆ.
ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ನಟಿಸಿದ್ದ ಸಂಚಾರಿ ವಿಜಯ್, ಕಿರುತೆರೆಯಲ್ಲಿ ಕೂಡ ನಟಿಸಿದ್ದಾರೆ. ರಂಗಪ್ಪ ಹೋಗ್ನಿಟ್ನಾ, ರಾಮರಾಮ ರಘುರಾಮ, ವಿಲನ್, ದಾಸ್ವಾಳ, ಒಗ್ಗರಣೆ, ಹೋಂ ಸ್ಟೇ, ಸಿನಿಮಾ ಮೈ ಡಾರ್ಲಿಂಗ್, ಮಾರಿಕೊಂಡವರು, ಸಿಪಾಯಿ, ಶುದ್ದಿ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ಭಲೇ ಜೋಡಿ, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ವೈಟ್ ಹಾರ್ಸ್ ಮೊದಲಾದ ಚಿತ್ರಗಳಲ್ಲಿ ಪೋಷಕ ಪಾತ್ರವನ್ನು ಮಾಡುವ ಮಾಡಿದ್ದರು.