ಸಂಚಾರಿ ವಿಜಯ್ ಕೊನೆಯವರೆಗೂ ಮರೆಯದ ಆ ನೋವು ಏನು ಗೊತ್ತಾ? | ಕಣ್ಣೀರು ತರಿಸುತ್ತೆ ಆ ಘಟನೆ! - Mahanayaka
9:17 AM Tuesday 24 - December 2024

ಸಂಚಾರಿ ವಿಜಯ್ ಕೊನೆಯವರೆಗೂ ಮರೆಯದ ಆ ನೋವು ಏನು ಗೊತ್ತಾ? | ಕಣ್ಣೀರು ತರಿಸುತ್ತೆ ಆ ಘಟನೆ!

sanchari vijay
20/06/2021

ಇತ್ತೀಚೆಗಷ್ಟೆ ಸಂಚಾರಿ ವಿಜಯ್ ಅವರು ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ. ಅವರ ಸಾವು ಮಾತ್ರ ಪ್ರತಿಯೊಬ್ಬರ ಹೃದಯದಲ್ಲಿಯೂ ನೋವಾಗಿಯೇ ಕುಳಿತಿದೆ. ಆದರೆ ದೊಡ್ಡ ಸ್ಟಾರ್ ನಟರಿಗೇ ಸಿಗದ ರಾಷ್ಟ್ರಪ್ರಶಸ್ತಿ ಸಂಚಾರಿ ವಿಜಯ್ ಅವರಿಗೆ ದೊರಕಿದ್ದರೂ, ವಿಜಯ್ ಅವರ ಹೃದಯದಲ್ಲಿ ನೋವೊಂದು ಹಾಗೆಯೇ ಉಳಿದಿತ್ತು.

ಸಂಚಾರಿ ವಿಜಯ್ ಅವರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದ್ದರೂ, ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಅದ್ಭುತ ಕಲಾವಿದ ಇದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತೇ ಇರಲಿಲ್ಲ. ಅದಕ್ಕೆ ನಮ್ಮ ಸಮಾಜದಲ್ಲಿ ಬಿಟ್ಟೂ ಬಿಡದೇ ಕಾಡುವ ತಾರತಮ್ಯ ಕೂಡ ಕಾರಣವಾಗಿರಬಹುದು. ಅವರು ನಿಧನರಾದ ಬಳಿಕವೂ ಕನ್ನಡ ಇಂಡಸ್ಟ್ರಿಯವರು ಹೇಗೆ ವರ್ತಿಸಿದ್ದಾರೆ ಎನ್ನುವುದು ಕೂಡ ಜನರ ಕಣ್ಣ ಮುಂದೆ ಇದೆ. ಅವರಿಗೆ ಮರಣದ ಬಳಿಕವೂ ಗೌರವ ಸೂಚಿಸುವ ಕೆಲಸವನ್ನು ಕನ್ನಡ ಚಿತ್ರರಂಗ ಸರಿಯಾಗಿ ನಿರ್ವಹಿಸದೇ ಅವರಿಗೆ ಸಾವಿನ ಬಳಿಕವೂ ಘೋರ ಅವಮಾನ ಮಾಡಲಾಗಿದೆ.

ಕನ್ನಡ ಚಿತ್ರರಂಗಕ್ಕೆ ಸಂಚಾರಿ ವಿಜಯ್ ಅವರು ನಾನು ಅವನಲ್ಲ, ಅವಳು ಎನ್ನುವ ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ತಂದು ಕೊಟ್ಟರು. ಆದರೆ, ಅದಕ್ಕಾಗಿ ಅವರಿಗೆ ಸಿಕ್ಕಿದ ಗೌರವ ಏನು? ದೊಡ್ಡ ದೊಡ್ಡ ಸ್ಟಾರ್ ನಟರುಗಳ ನಡುವೆಯೇ ಸಂಚಾರಿ ವಿಜಯ್ ಅವರು ಕಮರ್ಷಿಯಲ್ ಚಿತ್ರಗಳಿಗೆ ಹೆಚ್ಚಿನ ಮಹತ್ವ ನೀಡದೇ, ಸಮಾಜದ ಒಳಿತಿಗಾಗಿ ಚಿತ್ರಗಳನ್ನು ಮಾಡುತ್ತಿದ್ದರು. ಸಮಾಜಕ್ಕೆ ಏನೋ ಸಂದೇಶವನ್ನು ನೀಡಲು ಅವರು  ಪ್ರಯತ್ನಿಸುತ್ತಿದ್ದರು. ಆದರೆ, ಅವರ ಆ ಪ್ರಯತ್ನ ಯಶಸ್ವಿಯಾಗುವ ಮೊದಲೇ ಅವರು ಹೊರಟು ಹೋದರು.

ಸಂಚಾರಿ ವಿಜಯ್ ಅವರು ಮೃತಪಟ್ಟ ಬಳಿಕ ಅವರ ಸ್ನೇಹಿತರೊಬ್ಬರು  ಹೇಳಿರುವ ವಿಚಾರವನ್ನು ಕೇಳಿದಾಗ ಎಂತಹವರಿಗಾದರೂ ಕಣ್ಣೀರು ಬರಬಹುದು. ಒಬ್ಬ ಮನುಷ್ಯನಾಗಿದ್ದರೆ, ಖಂಡಿತಾವಾಗಿಯೂ ಸಂಚಾರಿ ವಿಜಯ್ ಅವರ ಮನಸ್ಸಿನೊಳಗಿದ್ದ ಮಾತುಗಳು ಯಾರ ಹೃದಯಕ್ಕಾದರೂ ಚುಚ್ಚಬಹುದು. ಅಂತಹ  ಆ ಘಟನೆ ಏನು?

ಸಂಚಾರಿ ವಿಜಯ್ ಅವರ ಆಪ್ತ ಸ್ನೇಹಿತರೊಬ್ಬರು ಒಂದು ದಿನ ಸಂಚಾರಿ ವಿಜಯ್ ಅವರ ಮನೆಗೆ ಹೋಗುತ್ತಾರೆ. ಈ ವೇಳೆ ಸಂಚಾರಿ ವಿಜಯ್ ಅವರೊಂದಿಗೆ ಮಾತನಾಡುತ್ತಾ, ಅವರ ರಾಷ್ಟ್ರಪ್ರಶಸ್ತಿಯನ್ನು ಸ್ನೇಹಿತನಿಗೆ ತೋರಿಸುತ್ತಾರೆ. ರಾಷ್ಟ್ರಪ್ರಶಸ್ತಿಯನ್ನು ತೋರಿಸುತ್ತಿದ್ದಂತೆಯೇ ಸಹಜವಾಗಿ ಅವರ ಸ್ನೇಹಿತ, “ಸರ್… ನೀವು ತುಂಬಾ ಗ್ರೇಟ್, ರಾಷ್ಟ್ರಪ್ರಶಸ್ತಿಯನ್ನೇ ಪಡೆದುಕೊಂಡಿದ್ದೀರಿ” ಎಂದು ಅಚ್ಚರಿಯಿಂದ ಮಾತನಾಡಿದರಂತೆ. ಈ ಸಂದರ್ಭ ಸಂಚಾರಿ ವಿಜಯ್ ಅವರು, “ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದೇನೆ. ಆದರೆ, ಏನು ಪ್ರಯೋಜನ?” ಎಂದು ಅವರು ಪ್ರಶ್ನಿಸಿದರಂತೆ. “ಯಾಕೆ ಸರ್?” ಎಂದು ಸ್ನೇಹಿತ ಪ್ರಶ್ನಿಸಿದಾಗ, “ನನಗೆ ಮಲಯಾಳಂ ಇಂಡಸ್ಟ್ರಿಯವರು ಅಲ್ಲಿಗೆ ಹೋದಾಗ ನೀಡಿದ ಗೌರವ ನನಗೆ ಕನ್ನಡ ಚಿತ್ರರಂಗದಲ್ಲಿ ನೀಡಲಿಲ್ಲ” ಎಂದು ಸಂಚಾರಿ ಬೇಸರಿಸಿದರಂತೆ. ರಾಷ್ಟ್ರಪ್ರಶಸ್ತಿ ವಿಜೇತರಾದ ತಕ್ಷಣವೇ ಮಲಯಾಳಂ ಇಂಡಸ್ಟ್ರಿಯವರು, ಸಂಚಾರಿ ವಿಜಯ್ ಅವರನ್ನು ಕರೆದು, ಬನ್ನಿ ಸರ್, ನಮ್ಮಇಂಡಸ್ಟ್ರಿಯಲ್ಲಿ ದುಡಿಯಿರಿ ಎಂದು ಬಹಿರಂಗವಾಗಿ ಆಹ್ವಾನಿಸಿದರಂತೆ. ಆದರೆ ಸಂಚಾರಿ ವಿಜಯ್ ಅವರು ಆ ಅವಕಾಶವನ್ನು ನಿರಾಕರಿಸಿದ್ದರಂತೆ.

ನಮ್ಮ ಮನೆಯ ಮಗು ಶಾಲೆಯಲ್ಲಿಯೋ ಯಾವುದೋ ಒಂದು ಸ್ಪರ್ಧೆಯಲ್ಲಿ ಗೆದ್ದು ಮನೆಗೆ ಬಂದಾಗ. ಮನೆಯಲ್ಲಿರುವವರು ಆ ಮಗುವನ್ನು ಮುದ್ದಿಸದೇ, ಪ್ರೀತಿಸದೇ, ಒಂದು ನಾಲ್ಕು ಮಾತುಗಳಿಂದ ಪ್ರೋತ್ಸಾಹಿಸದೇ ಇದ್ದರೆ, ಆ ಮಗುವಿನ ಮನಸ್ಸಿಗೆ ಎಷ್ಟು ನೋವಾಗಬಹುದೋ ಆ ನೋವು ಸಂಚಾರಿ ವಿಜಯ್ ಅವರ ಹೃದಯದಲ್ಲಿತ್ತು. ಆದರೆ, ತಮ್ಮ ಮನೆಯ ಮಕ್ಕಳು ಸತ್ತರೂ, ಅವರ ಬಗ್ಗೆ ಕಣ್ಣೀರು ಹಾಕದ ಪಾಪಿಗಳು, ಸ್ವಾರ್ಥಿಗಳ ನಡುವೆ ನಾನಿದ್ದೇನೆ ಎನ್ನುವುದು ಆ ಮುಗ್ಧ ಕನ್ನಡ ಕಂದನಿಗೆ ತಿಳಿದಿರಲಿಲ್ಲ.

ಸತ್ತ ಬಳಿಕವೂ ಸಂಚಾರಿ ವಿಜಯ್ ಗೆ ಗೌರವ ನೀಡುವ ಯೋಗ್ಯತೆ ಪ್ರದರ್ಶಿಸಲಿಲ್ಲ. ಇದೇ ಸಂಚಾರಿ ವಿಜಯ್, ತಮಿಳೋ, ಮಲಯಾಳಂ ಇಂಡಸ್ಟ್ರಿಯಲ್ಲಿಯೋ ಇರುತ್ತಿದ್ದರೆ, ಇಂದು ಸಂಚಾರಿ ವಿಜಯ್ ಗೆ ಅವರು ತಮ್ಮ ಹೃದಯವನ್ನೇ ತೆರೆದಿಡುತ್ತಿದ್ದರು. ಆದರೆ ಕನ್ನಡ ಇಂಡಸ್ಟ್ರಿ ನಡೆದುಕೊಂಡ ರೀತಿ ಬಹಳ ಹೀನಾಯ ಸ್ಥಿತಿಯದ್ದಾಗಿತ್ತು. ಸಂಚಾರಿ ವಿಜಯ್ ಗೆ ಬಂದಂತ ನೋವು ಯಾವುದೇ ನಟನಿಗೂ ಬಾರದೇ ಇರಲಿ ಎನ್ನುವುದು ಈ ಲೇಖನದ ಆಶಯವಾಗಿದೆ. ಸಂಚಾರಿ ವಿಜಯ್ ಗೆ ವಿಜಯ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಗಳು ಸಿಗುತ್ತಿವೆ. ಇನ್ನು ಯಾರಾದರೂ, ನಾವು ಸಂಚಾರಿ ವಿಜಯ್ ಗೆ ಗೌರವಿಸದೇ ದೊಡ್ಡವರಾದೆವು ಎಂದು ಅಂದುಕೊಂಡಿದ್ದರೆ, ನಿಮ್ಮ ಅರ್ಹತೆ ಏನು ಎನ್ನುವುದು ಜನರಿಗೆ ತಿಳಿಯುತ್ತದೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ