ಸಂಕೇಶ್ವರರೇ, ಹಸಿ ಮೆಣಸು ಮೂಗಿಗಿಟ್ಟರೂ ಸಿಂಬಳ ಸುರಿಯುತ್ತದೆ, ಅದಲ್ಲೂ ಆಕ್ಸಿಜನ್ ಇದೆಯೇ? | ಗಣೇಶ್ ಕೆ.ಪಿ. - Mahanayaka
6:14 PM Wednesday 11 - December 2024

ಸಂಕೇಶ್ವರರೇ, ಹಸಿ ಮೆಣಸು ಮೂಗಿಗಿಟ್ಟರೂ ಸಿಂಬಳ ಸುರಿಯುತ್ತದೆ, ಅದಲ್ಲೂ ಆಕ್ಸಿಜನ್ ಇದೆಯೇ? | ಗಣೇಶ್ ಕೆ.ಪಿ.

vijayasankeshwara vs ganesh kp
30/04/2021

ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬರೂ ವೈದ್ಯರಾಗುತ್ತಿದ್ದಾರೆ. ಕೊರೊನಾಕ್ಕೆ ನಾನಾ ರೀತಿಯ ಔಷಧಿಗಳನ್ನು ಹೇಳುತ್ತಿದ್ದಾರೆ. ಈ ಪೈಕಿ ಬಹಳ ಬೇಗನೇ ಫೇಮಸ್ ಆಗಿದ್ದು, ಉದ್ಯಮಿ ಮತ್ತು ಮಾಧ್ಯಮಗಳ ಒಡೆಯ ಎಂದೇ ಕರೆಯಲ್ಪಡುವ ವಿಜಯ ಸಂಕೇಶ್ವರ. ಲಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಂಡರೆ, ಶ್ವಾಸಕೋಶ ಶುದ್ಧವಾಗುತ್ತದೆ, ಆಕ್ಸಿಜನ್ ನ ಅವಶ್ಯಕತೆ ಇಲ್ಲ ಎಂದೆಲ್ಲ ವಿಜಯ ಸಂಕೇಶ್ವರರು ಹೇಳಿದ್ದಾರೆ. ಇದನ್ನು ಅಮಾಯಕ ಜನರು ಕೂಡ ನಂಬಿದ್ದಾರೆ. ಕೆಲವರು ಇಂತಹ ಪ್ರಯೋಗ ಮಾಡಿ ತೀವ್ರ ಹಿಂಸೆಯನ್ನು ಪಟ್ಟಿದ್ದಾರೆ ಕೂಡ. ಇನ್ನು ಕೆಲವರಿಗೆ ಸಂಕೇಶ್ವರರು ಹೇಳಿದ್ದು ನಿಜ ಎನ್ನುವ ಭಾವನೆಯೂ ಬಂದಿದೆ.

ವಿಜಯ ಸಂಕೇಶ್ವರರು, ಕೊರೊನಾದ ವಿರುದ್ಧ ನಿಂಬೆ ಹಣ್ಣನ್ನು ಪ್ರಯೋಗ ಮಾಡಬಹುದು ಎಂದು ಹೇಳುವುದೇ ಆಗಿದ್ದರೆ, ಅದನ್ನು ವೈಜ್ಞಾನಿಕವಾಗಿ ಸಾಬೀತು ಮಾಡುವ ಬಹಳಷ್ಟು ಅವಕಾಶಗಳಿವೆ. ವಿಜಯ ಸಂಕೇಶ್ವರ ಅವರು ಲಿಂಬೆ ಹಣ್ಣಿನಿಂದ ಶ್ವಾಸಕೋಶ ಶುದ್ಧಿ ಮಾಡಬಹುದು ಎನ್ನುವುದನ್ನು ವೈಜ್ಞಾನಿಕ ಪ್ರಯೋಗಗಳಿಂದ ಸಾಬೀತುಪಡಿಸಿ, ಆ ಬಳಿಕ ಸಾರ್ವಜನಿಕವಾಗಿ ಇಂತಹದ್ದೊಂದು ಹೇಳಿಕೆ ನೀಡಿದ್ದರೆ, ಅದನ್ನು ಒಪ್ಪಬಹುದಿತ್ತು. ಆದರೆ, ಯಾವುದೇ ಅಧ್ಯಯನ, ಪ್ರಯೋಗಗಳನ್ನು ಮಾಡದೇ,  ನಾನು ಮೂಗಿಗೆ ನಿಂಬೆ ಹಣ್ಣಿನ ರಸ ಪ್ರಯೋಗ ಮಾಡಿ, ತಮ್ಮ ಸ್ನೇಹಿತರಿಗೂ ಅದನ್ನ ಹೇಳಿದ್ದೆ. ಅವರಿಗೆ ಕೂಡ ಇದು ಫಲ ನೀಡಿದೆ. ನೀವೂ ಟ್ರೈ ಮಾಡಿ ಎಂದು ಅವರು ಸಾರ್ವಜನಿಕವಾಗಿ ಹೇಳುವುದು ಎಷ್ಟು ಸರಿ ಎನ್ನುವುದನ್ನೂ ಯೋಚಿಸಬೇಕು.

ನಿಂಬೆ ರಸ ಮೂಗಿಗೆ ಹಾಕಿದಾಗ ಮೂಗಿನಲ್ಲಿರುವ ಕಫ ಕ್ಲೀನ್ ಆಗುತ್ತದೆ ಎನ್ನುವುದು ಸಂಕೇಶ್ವರರ ವಾದ ಆದರೆ, ಮೂಗಿನಲ್ಲಿರುವುದು ಕಫ ಅಲ್ಲ, ಅದು ಸಿಂಬಳ(ನೆಗಡಿ) ಎಂದು ತಜ್ಷರಾಗಿರುವ ನರೇಂದ್ರ ನಾಯಕ್ ಅವರು ಹೇಳುತ್ತಿದ್ದಾರೆ. ಮೂಗಿಗೆ ಕಿರಿಕಿರಿ ಅನ್ನಿಸುವ ಯಾವುದೇ ವಸ್ತುವನ್ನು ಇಟ್ಟರೂ ಮೂಗಿನಲ್ಲಿ ಸಿಂಬಳ ಬರುತ್ತದೆ. ನಿಂಬೆ ಹಣ್ಣಿನ ರಸ ಕೂಡ ಮೂಗಿಗೆ ಕಿರಿಕಿರಿ ಉಂಟು ಮಾಡುವ ಒಂದು ದ್ರವ. ಹಾಗಾಗಿ ಮೂಗಿಗೆ ಹಾಕಿದ ತಕ್ಷಣವೇ ಮೂಗಿಗೆ ಕಿರಿಕಿರಿ ಅನ್ನಿಸಿ, ಸಿಂಬಳ ಹೊರ ಬರುತ್ತದೆ. ಇದನ್ನು ಮೂಗಿಗೆ ಲಿಂಬೆ ರಸ ಆಕ್ಸಿಜನ್ ಒದಗಿಸುತ್ತದೆ ಎಂದು ಹೇಳುವುದು ಎಷ್ಟು ಸರಿ ಎಂದು ನರೇಂದ್ರ ನಾಯಕ್ ಅವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ಮೊದಲು ವಿಜಯ ಸಂಕೇಶ್ವರ ಅವರು ಉತ್ತರಿಸುವುದು ಉತ್ತಮ ಅಲ್ಲವೇ?

ವಿಜಯ ಸಂಕೇಶ್ವರ ಅವರು ಹೇಳಿರುವ ಮಾತೇ ಸರಿ ಎಂದೇ ವಾದಿಸುವುದಾದರೆ, ಮೂಗಿಗೆ ನಿಂಬೆ ಹಣ್ಣಿನ ಬದಲು ಹಸಿ ಮೆಣಸಿನ ಕಾಯಿಯನ್ನು ತುಂಡು ಮಾಡಿ ಮೂಗಿನೊಳಗೆ ಒಂದು ಬಾರಿ ಇಟ್ಟು ನೋಡಿ, ನಿಂಬೆ ಹಣ್ಣಿನ ರಸ ಹಾಕಿದಾಗ ಬರುವುದಕ್ಕಿಂತಲೂ ಹೆಚ್ಚು ಸಿಂಬಳ ಮೂಗಿನಿಂದ ಹೊರ ಬರುತ್ತದೆ. ಹಾಗಾದರೆ, ಹಸಿ ಮೆಣಸಿನ ಕಾಯಿಯಲ್ಲಿಯೂ ಆಕ್ಸಿಜನ್ ಇದೆ ಎಂದು ವಾದಿಸಲು ಸಾಧ್ಯವೇ?

ಸಂಸದರಾಗಿರುವ ಪ್ರತಾಪ್ ಸಿಂಹ ಅವರು, ಮಾತನಾಡುತ್ತಾ, ಭಾರತೀಯ ಔಷಧಿ ಪದ್ಧತಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.  ಆದರೆ, ಇಲ್ಲಿ ಯಾರು ಕೂಡ ಆಯುರ್ವೇದ ಅಥವಾ ಭಾರತೀಯ ಮೂಲದ ನಾಟಿ ಔಷಧಿಗಳ ವಿರುದ್ಧವಾಗಿ ಮಾತನಾಡುತ್ತಿಲ್ಲ. ಆದರೆ, ಯಾವುದೇ ಆಧಾರಗಳಿಲ್ಲದೇ, ಮೂಗಿಗೆ ಆಕ್ಸಿಜನ್ ಕೊಡುತ್ತದೆ, ಸಿ ವಿಟಮಿನ್ ಇದೆ ಎಂದು ಡೋಂಗಿ ಮಾತುಗಳನ್ನಾಡುವುದು ಸರಿಯಲ್ಲ. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ನಿಂಬೆ ಹಣ್ಣಿನಿಂದ ಶ್ವಾಸಕೋಶವನ್ನು ಶುದ್ಧ ಮಾಡಲು ಸಾಧ್ಯವಾಗುವುದೇ ಆದರೆ, ಯಾಕೆ ಜನರು ಆಕ್ಸಿಜನ್ ಇಲ್ಲದೇ ಸಾಯುತ್ತಿದ್ದಾರೆ? ಪ್ರತಿ ಆಸ್ಪತ್ರೆಗೂ ಆಕ್ಸಿಜನ್ ಬದಲು ಲಿಂಬೆ ಹಣ್ಣನ್ನು ಸರಬರಾಜು ಮಾಡಬಹುದಲ್ಲವೇ? ಇವೆಲ್ಲದಕ್ಕೂ ಸರ್ಕಾರ ಉತ್ತರಿಸಬೇಕು. ವಿಜಯ ಸಂಕೇಶ್ವರರು ಹೇಳಿರುವುದು ನಿಜವಾಗಿದ್ದರೆ, ಅದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಿ. ಇಲ್ಲವಾದರೆ, ಕೊವಿಡ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು.

ಇತ್ತೀಚಿನ ಸುದ್ದಿ