ಸಾರಿಗೆ ನೌಕರರ ವಿಚಾರದಲ್ಲಿ ಸರ್ಕಾರದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೇ?
ಬೆಂಗಳೂರು: ಸಾರಿಗೆ ನೌಕರರಿಗೆ ಸರ್ಕಾರವು ವೇತನ ನೀಡದೇ ಅಮಾನವೀಯವಾಗಿ ನಡೆದುಕೊಂಡಿದ್ದು, ಇದರ ವಿರುದ್ಧ ಇಂದು ಕೂಡ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿಯ ಕೆಲವೇ ಕೆಲವು ಬಸ್ ಗಳು ಇಂದು ಸಂಚರಿಸಿವೆ.
ಕೆಎಸ್ಸಾರ್ಟಿಸಿಯ 93 ಮತ್ತು ಬಿಎಂಟಿಸಿಯ 55 ಬಸ್ ಗಳು ಮಾತ್ರವೇ ಕಾರ್ಯಾರಂಭ ಮಾಡಿವೆ. ಮಂಗಳೂರು ವಿಭಾಗದಲ್ಲಿ ಅತೀ ಹೆಚ್ಚು ಕೆಎಸ್ಸಾರ್ಟಿಸಿ ಬಸ್ ಗಳು ಸಂಚರಿಸಿವೆ. ಮಂಗಳೂರಿನಲ್ಲಿ 87 ಕೆಎಸ್ಸಾರ್ಟಿಸಿ ಬಸ್ ಗಳು ಸಂಚರಿಸಿದ್ದು, ಶಿವಮೊಗ್ಗ 3, ದಾವಣಗೆರೆ 2 ಮತ್ತು ಚಿತ್ರದುರ್ಗ ವಿಭಾಗದಲ್ಲಿ 1 ಬಸ್ ಸಂಚರಿಸಿವೆ.
ಸಂಸ್ಥೆಯ ಸಿಬ್ಬಂದಿ ಅಲ್ಲದವರನ್ನು ಕರೆತಂದು ಸಂಸ್ಥೆಯು ಬಸ್ ಆರಂಭಿಸಿದೆ. ವಾಮಮಾರ್ಗವನ್ನು ಹಿಡಿಯುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಸಾರಿಗೆ ನೌಕರರ ಜೊತೆಗೆ ಅಮಾನವೀಯವಾಗಿ ವರ್ತಿಸಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ನೌಕರರ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದ ಸರ್ಕಾರ ಖಾಸಗಿ ಚಾಲಕರನ್ನು ಕರೆತಂದು ಬಸ್ ಗಳನ್ನು ಓಡಿಸಲು ಮುಂದಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಇದು ಕಾನೂನು ಬಾಹಿರವಾಗಿದ್ದು, ಸರ್ಕಾರವು ಸಾರಿಗೆ ಸಂಸ್ಥೆಯ ನೌಕರರಿಗೆ ವೇತನ ನೀಡದೇ ಸತಾಯಿಸಿದ್ದು ಹಾಗೂ ಇದೀಗ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದ ಸಂದರ್ಭದಲ್ಲಿ ಖಾಸಗಿ ಚಾಲಕರನ್ನು ಕರೆತಂದು ಬಸ್ ಸಂಚಾರ ಆರಂಭಿಸಿರುವುದು ಮಾನವ ಹಕ್ಕುಗಳು ಉಲ್ಲಂಘನೆಯಾಗಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.