ಸರ್ಕಾರ ಇಂತಹ ಸಂದರ್ಭದಲ್ಲಿಯೂ ಜನರ ಕಣ್ಣಿಗೆ ಮಣ್ಣೆರಚುವುದು ಎಷ್ಟು ಸರಿ?
ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಜನರ ಪ್ರಾಣವನ್ನು ಹಿಂಡುತ್ತಿದೆ. ಇತ್ತ ಉಪ ಚುನಾವಣೆಯಲ್ಲಿ ಬ್ಯುಸಿ ಇದ್ದ ರಾಜಕೀಯ ಪಕ್ಷಗಳು ಇದೀಗ ಕೊರೊನಾದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾದ ಪ್ರಹಾರಕ್ಕೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇತ್ತ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕಫ್ಯೂ ಮಾಡುವ ಮೂಲಕ ಕೈತೊಳೆದುಕೊಂಡಿದೆ. ರಾಜ್ಯದಲ್ಲಿ ಸರ್ಕಾರ ಮಾಡಬೇಕಾದ ಕೆಲಸವನ್ನು ಬಿಟ್ಟು ಕೇವಲ ಕರ್ಫ್ಯೂ ಮಾಡಿ ಸುಮ್ಮನಾಗಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ.
ಕೇವಲ ನಿರ್ಬಂಧಗಳನ್ನು ಹಾಕುವುದೇ ಕೊರೊನಾ ನಿವಾರಣೆ ಕ್ರಮ ಎಂದು ಸರ್ಕಾರ ಭಾವಿಸಿದೆ. ಇದು ತಪ್ಪು ಅಭಿಪ್ರಾಯವಾಗಿದೆ. ನೈಟ್ ಕರ್ಫ್ಯೂ ಅಥವಾ ವೀಕೆಂಡ್ ಕರ್ಫ್ಯೂನಿಂದ ಕೊರೊನಾ ಹೇಗೆ ನಿಯಂತ್ರಣವಾಗುತ್ತದೆ ಎಂಬ ಬಗ್ಗೆ ಸರ್ಕಾರದ ಬಳಿಯಲ್ಲಿ ಉತ್ತರವಿಲ್ಲ. ಕೊರೊನಾ ನಿಯಂತ್ರಣಕ್ಕೆ ಸಲಹೆ ನೀಡುತ್ತಿರುವ ತಜ್ಞರ ಸಮಿತಿ ಕೊರೊನಾ ಮೊದಲ ಅಲೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಯಾವ ಸಲಹೆಗಳನ್ನು ನೀಡಿದೆಯೋ ಅದೇ ಸಲಹೆಗಳನ್ನು ನೀಡಿದೆ.
ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಗಮನಿಸಿದರೆ, ಸರ್ಕಾರ ಸಾರ್ವಜನಿಕರ ಮೇಲೆಯೇ ನಿರ್ಬಂಧಗಳನ್ನು ಹಾಕಲು ಅಥವಾ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಲು ಮಾಡಿರುವಂತಹ ಕ್ರಮಗಳೇ ಕಂಡು ಬರುತ್ತಿವೆ. ಮಾಧ್ಯಮಗಳಲ್ಲಿ ಕೊರೊನಾ ಸಾವುಗಳ ಬಗ್ಗೆ ಬರುತ್ತಿರುವ ವರದಿಗಳು ಜನರನ್ನು ಕಂಗೆಡಿಸಿವೆ. ಸರ್ಕಾರದ ನಿರ್ಲಕ್ಷ್ಯದ ಕ್ರಮಗಳಿಂದ ಕರ್ನಾಟಕವನ್ನು ಕೊರೊನಾದಿಂದ ರಕ್ಷಿಸಲು ಸಾಧ್ಯ ಇದೆಯೇ ಎಂಬ ಅನುಮಾನಗಳು ಸದ್ಯ ಕಾಡಿವೆ.
ಸರ್ಕಾರವು ಲಾಕ್ ಡೌನ್ ಘೋಷಿಸಬೇಕು ಎಂದು ಜನರು ಕೂಡ ಅಪೇಕ್ಷೆ ಪಡುತ್ತಿಲ್ಲ. ಆದರೆ ರಾಜ್ಯದಲ್ಲಿರುವ ಆಸ್ಪತ್ರೆಗಳನ್ನು ಕೊರೊನಾಕ್ಕಾಗಿ ಸಮರ್ಪಕವಾಗಿ ಸಜ್ಜು ಮಾಡಬೇಕು. ಯಾರು ಕೂಡ ಬೆಡ್ ಇಲ್ಲ ಎಂದು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಅಲೆದಾಡುವಂತಾಗಬಾರದು. ಇನ್ನೊಂದು ಮುಖ್ಯ ವಿಚಾರ ಏನೆಂದರೆ, ಸದ್ಯ ಕೊವಿಡ್ ಆಸ್ಪತ್ರೆಗಳಲ್ಲಿ ಯಾವ ರೀತಿಯಲ್ಲಿ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಚಿಕಿತ್ಸೆಯ ಗುಣಮಟ್ಟ ಏನು? ಕೊವಿಡ್ ವಾರ್ಡ್ ಗಳಲ್ಲಿ ಸಮರ್ಪಕ ಚಿಕಿತ್ಸೆ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಸರ್ಕಾರ ರಹಸ್ಯವಾಗಿ ಮಾಹಿತಿ ಪಡೆದುಕೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.
ಸರ್ಕಾರವು ವಾಸ್ತವಾದ ಕ್ರಮಗಳನ್ನು ಈ ಸಂದರ್ಭದಲ್ಲಿ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಜನರ ಕಣ್ಣಿಗೆ ಮಣ್ಣೆರಚುವ ಕ್ರಮಗಳನ್ನು ಕೈಗೊಳ್ಳಬಾರದು ಎನ್ನುವ ಆಕ್ರೋಶ್ ಮಾತುಗಳು ಕೇಳಿ ಬಂದಿವೆ.