ಚಾಮರಾಜನಗರ ಆಕ್ಸಿಜನ್ ದುರ್ಘಟನೆ: ಸರ್ಕಾರ ಕಣ್ಣಿದ್ದೂ ಕುರುಡಾಗಿದೆ | ಎಸ್ ಡಿಪಿಐ ಆಕ್ರೋಶ - Mahanayaka
3:51 PM Thursday 12 - December 2024

ಚಾಮರಾಜನಗರ ಆಕ್ಸಿಜನ್ ದುರ್ಘಟನೆ: ಸರ್ಕಾರ ಕಣ್ಣಿದ್ದೂ ಕುರುಡಾಗಿದೆ | ಎಸ್ ಡಿಪಿಐ ಆಕ್ರೋಶ

sdpi
03/07/2021

ಮೃತರ ಪೈಕಿ ಶೇ.50 ಎಸ್ಸಿ-ಎಸ್ಟಿಗಳು

ಚಾಮರಾಜನಗರ:  ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರ್ಘಟನೆಯಲ್ಲಿ ಸಾವಿಗೀಡಾಗಿದವರ ಕುಟುಂಬಸ್ಥರಿಗೆ 50 ಲಕ್ಷ ಪರಿಹಾರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಚಾಮರಾಜನಗರ ಜಿಲ್ಲಾ ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ  ದಿನಾಂಕ 02/05/2021ರ ಭಾನುವಾರ ಮಧ್ಯ ರಾತ್ರಿ ಆಕ್ಸೀಜನ್ ಪೊರೈಕೆ ಆಗದೆ 37 ಮಂದಿ (ನ್ಯಾಯಮೂರ್ತಿ A.N ವೇಣುಗೋಪಾಲ್ ಗೌಡ ವರದಿ) ಮೃತರಾಗಿ ಈಗಾಗಲೇ ಎರಡು ತಿಂಗಳು ಆಗಿವೆ. ಆದರೆ ಸರ್ಕಾರ ಎಲ್ಲ  ಸಂತ್ರಸ್ತರಿಗೆ ಇಲ್ಲಿಯವರೆಗೂ  ಪರಿಹಾರ ನೀಡಿಲ್ಲ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಸಹ ಕೈಗೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಮೂರ್ತಿ ವೇಣುಗೋಪಾಲ್ ರವರು ತಮ್ಮ ಪ್ರಾಥಮಿಕ ತನಿಖಾ ವರದಿಯಲ್ಲಿ ಘಟನೆಗೆ  ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಕುರಿತು “ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ. ಇಷ್ಟಾದರೂ ಸಹ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವ ಒಬ್ಬ ಅಧಿಕಾರಿಯ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎಂದು ಎಸ್ ಡಿಪಿಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

sdpi

ಇನ್ನೂಂದು ಕಡೆ ಸರ್ಕಾರ ನೇಮಕ ಮಾಡಿರುವ ಏಕ ಸದಸ್ಯ ಆಯೋಗದ ಕಚೇರಿ ಸಹ ಮೈಸೂರಿನಲ್ಲಿದೆ. ಸಂತ್ರಸ್ತರು ಮೈಸೂರಿಗೆ ಹೋಗಿ ದೂರು ನೀಡುವುದು ಅಥವಾ ಅಗತ್ಯಕ್ಕೆ ಅನುಸಾರವಾಗಿ ಪದೇ ಪದೇ ಆಯೋಗದ ಕಚೇರಿಗೆ ಹೋಗಿ ಬರಲು ಕಷ್ಟ ಆಗುತ್ತಿದೆ. ಈ ಅವ್ಯವಸ್ಥೆಯೂ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಸಂತ್ರಸ್ತರಿಗೆ ನ್ಯಾಯ ಮರಿಚೀಕೆಯಾಗಿದೆ.  ದುರ್ಘಟನೆಗೆ ಬಲಿಯಾದವರಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಎಸ್.ಸಿ/ಎಸ್.ಟಿ ಸಮುದಾಯದವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಆಧಾರ ಸ್ತಂಭವಾಗಿದ್ದ ಮನೆಯ ಯಜಮಾನ ಇಲ್ಲದೇ ಇವತ್ತು ಆ ಬಡಪಾಯಿ ಕುಟುಂಬಸ್ಥರ ಜೀವನ ಅಸ್ತವ್ಯಸ್ತವಾಗಿದೆ. ಆದರೆ ಸರ್ಕಾರ ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಸಂತ್ರಸ್ತರಿಗೆ 50 ಲಕ್ಷ ಪರಿಹಾರ ಮತ್ತು ದುರ್ಘಟನೆಗೆ ಕಾರಣಕರ್ತರಾದ ಎಲ್ಲ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡ ಬೇಕು ಎಂದು ಸಂತ್ರಸ್ತರ ಪರವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಚಾಮರಾಜನಗರ ಜಿಲ್ಲಾ ಸಮಿತಿ ಈ ಮೂಲಕ ಆಗ್ರಹಿಸುತ್ತದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಖಲೀಲ್ ಉಲ್ಲಾ, ಉಪಾಧ್ಯಕ್ಷ ಸೈಯದ್ ಆರೀಫ್, ಪ್ರಧಾನ ಕಾರ್ಯದರ್ಶಿ ಮಹೇಶ್, ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮದ್, ನಗರಸಭಾ ಸದಸ್ಯರಾದ ಸಮೀ ಉಲ್ಲಾ ಖಾನ್, ಮೊಹಮ್ಮದ್ ಅಮೀಖ್, ಪಿಎಫ್ ಐ ಜಿಲ್ಲಾ ಅಧ್ಯಕ್ಷ ಕಫೀಲ್ ಅಹಮದ್, ಜಿ.ಎಂ.ಗಾಡ್ಕರ್, ಸಂಘಸೇನಾ, ರಾಮಸಮುದ್ರ ಸುರೇಶ್ ಇತರರು ಹಾಜರಿದ್ದರು

ಇತ್ತೀಚಿನ ಸುದ್ದಿ