ರಾಜ್ಯ ಸರಕಾರದ ಪ್ರಚೋದನೆಗಳೇ ಸರಣಿ ಕೊಲೆ ನೇರಕಾರಣ: ಎಡ ಹಾಗೂ ಜಾತ್ಯಾತೀತ ಪಕ್ಷ, ಸಂಘಟನೆಗಳ ಜಂಟಿ ಹೇಳಿಕೆ
ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ಳಾರೆ, ಸುರತ್ಕಲ್ ನಲ್ಲಿ ಕೋಮುದ್ವೇಷದ ಹಿನ್ನಲೆಯಲ್ಲಿ ನಡೆದಿರುವ ಮೂರು ಕೊಲೆಗಳ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಎಡ ಹಾಗೂ ಜಾತ್ಯಾತೀತ ಪಕ್ಷ, ಸಂಘಟನೆಗಳು ಆತಂಕವನ್ನು ವ್ಯಕ್ತ ಪಡಿಸಿವೆ. ಈ ಕೊಲೆಗಳು ಜನರನ್ನು ಧರ್ಮಾಧಾರಿತವಾಗಿ ವಿಭಜಿಸಿ ರಾಜಕೀಯ ನಡೆಸುವ ಆಡಳಿತ ಪಕ್ಷ ಬಿಜೆಪಿ ಹಾಗೂ ಪರಿವಾರದ ಕೋಮುವಾದಿ ನೀತಿಯ ಫಲ ಎಂದು ಎಡ ಹಾಗೂ ಜಾತ್ಯಾತೀತ ಪಕ್ಷ, ಸಂಘಟನೆಗಳ ಜಂಟಿ ಹೇಳಿಕೆ ನೀಡಿದೆ.
ರಾಜ್ಯ ಸರಕಾರದ ವೈಫಲ್ಯ ಹಾಗೂ ಪ್ರಚೋದನೆಗಳೇ ಸರಣಿ ಕೊಲೆ ಹಾಗೂ ನಂತರದ ಬೆಳವಣಿಗೆಗಳಿಗೆ ನೇರ ಕಾರಣ. ಮುಖ್ಯ ಮಂತ್ರಿ ಬೊಮ್ಮಾಯಿ ಸಹಿತ ಬಿಜೆಪಿ ಜನಪ್ರತಿನಿಧಿಗಳು ಮತೀಯ ದ್ವೇಷದ ಕೊಲೆಗಳಿಗೆ ಸಂಬಂಧಿಸಿ ತನಿಖೆ, ಸಾಂತ್ವನ ಹಾಗೂ ಪರಿಹಾರ ವಿತರಣೆ ಸಂದರ್ಭ ಧರ್ಮಾಧಾರಿತ ತಾರತಮ್ಯ ಎಸಗಿರುವುದು ಖಂಡನಾರ್ಹ. ಕೊಲೆಗೀಡಾದ ಮೂರೂ ಕುಟುಂಬಗಳಿಗೆ ಸಮಾನ ಪರಿಹಾರ ವಿತರಣೆ, ತನಿಖೆಗೆ ವಿಶೇಷ ತನಿಖಾ ತಂಡದ ರಚಿಸುವ ಮೂಲಕ ನ್ಯಾಯ ಪಾಲಿಸುವಂತೆ ಮಂಗಳೂರಿನ ವಿಕಾಸ ಕಚೇರಿಯಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪೂರ್ವ ಧರ್ಮಾಧಾರಿತ ಕೊಲೆಗಳು ನಡೆಯುವುದು ಸಂಪ್ರದಾಯ ಎಂಬಂತಾಗಿದೆ. ಈ ಬಾರಿಯು ಜನಸಾಮಾನ್ಯರಿಗೆ ಕೊಲೆಗಳು ನಡೆಯುವ ಕುರಿತು ಆತಂಕ ಇತ್ತು. ಅದೀಗ ನಿಜವಾಗಿದೆ. ಕೋಮು ವೈಷಮ್ಯದ ಹಿಂಸೆ, ಕೊಲೆಗಳು ನಡೆದಾಗ ಸರಕಾರ ನ್ಯೂಟ್ರಲ್ ಆಗಿ ಕ್ರಮಗಳನ್ನು ಜರುಗಿಸಬೇಕು. ಒಂದು ಕಡೆಗೆ ವಾಲಬಾರದು. ಆದರೆ ಮುಖ್ಯಮಂತ್ರಿ ಸಹಿತ ಬಿಜೆಪಿ ಸರಕಾರ ಹಾಗೂ ಅದರ ಜನಪ್ರತಿನಿಧಿಗಳು ತಮ್ಮ ರಾಜಕೀಯ ಅಜೆಂಡಾದಂತೆ ಬಹು ಸಂಖ್ಯಾತ ಕೋಮುವಾದದ ಪರ ನಿಂತು ಕ್ರಮಗಳನ್ನು ಜರುಗಿಸಿರುವುದು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ನಿರ್ಲಜ್ಜ ಅಧ್ಯಾಯ. ಸಂತ್ರಸ್ತ ಕುಟುಂಬಗಳ ಭೇಟಿ, ಪರಿಹಾರ ಧನ ವಿತರಣೆಯಲ್ಲಿ ಕೊಲೆಗೀಡಾದ ಮುಸ್ಲಿಂ ಯುವಕರ ಕುಟುಂಬಗಳನ್ನು ಕಡೆಗಣಿಸಿರುವುದು ಚುನಾವಣಾ ಲಾಭದ ಉದ್ದೇಶದಿಂದ ಧರ್ಮಾಧಾರಿತವಾಗಿ ಮತಗಳ ಧ್ರುವೀಕರಣಕ್ಕೆ ನಡೆಸಿರುವ ನಿರ್ಲಜ್ಜ ತಂತ್ರ. ಸಾಮಾಜಿಕವಾಗಿ ಇದು ಗಂಭೀರ ಪರಿಣಾಮಗಳಿಗೆ ಎಡೆಮಾಡಲಿದೆ. ಮುಖ್ಯಮಂತ್ರಿ, ಸ್ಥಳೀಯ ಶಾಸಕರು, ಸಂಸದರುಗಳು ಈಗಲಾದರು ತಮ್ಮ ತಪ್ಪುಗಳನ್ನು ಅರಿತು ಸಂತ್ರಸ್ತ ಮುಸ್ಲಿಂ ಕುಟುಂಬಗಳನ್ನು ಭೇಟಿಯಾಗಬೇಕು. ಪರಿಹಾರ ಧನವನ್ನು ವಿತರಿಸಬೇಕು ಹಾಗೂ ಮೂರೂ ಕೊಲೆಗಳ ತನಿಖೆಗೆ ಹಿರಿಯ ಅಧಿಕಾರಿಗಳ ನೇತೃತ್ವದದ ವಿಶೇಷ ತನಿಖಾ ತಂಡ ನೇಮಿಸಬೇಕು ಎಂದು ಆಗ್ರಹಿಸಿವೆ.
ಪ್ರವೀಣ್ ನೆಟ್ಯಾರು ಅಂತಿಮ ದರ್ಶನದ ಸಂದರ್ಭ ಹಾಗೂ ನಂತರ ಬೆಳ್ಳಾರೆ, ಗುತ್ತಿಗಾರು ಮೊದಲಾದೆಡೆ ಹಿಂಸಾಚಾರ ನಡೆಸಿ ಅಲ್ಪಸಂಖ್ಯಾತ ಸಮುದಾಯದವರ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದವರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
ಪ್ರವೀಣ್ ನೆಟ್ಯಾರು ಅಂತಿಮ ದರ್ಶನದ ಸಂದರ್ಭ ಜನತೆ ವ್ಯಕ್ತಪಡಿಸಿದ ವ್ಯಾಪಕ ಆಕ್ರೋಶ ಬಿಜೆಪಿ ಆಡಳಿತ ಹಾಗೂ ಸಂಘ ಪರಿವಾರದ ಕೋಮು ಹಿಂಸೆಯ ಕುರಿತು ಜನ ಸಾಮಾನ್ಯರಲ್ಲಿ ಮುಡಗಟ್ಟಿರುವ ಆಕ್ರೋಶದ ಅಭಿವ್ಯಕ್ತಿ. ಆದರೆ ಸಂಘ ಪರಿವಾರ ಜನತೆಯ ಆಕ್ರೋಶವನ್ನು ಬಿಜೆಪಿಯ ಆಂತರಿಕ ಸಮಸ್ಯೆ ಹಾಗೂ ಮತ್ತಷ್ಟು ತೀವ್ರ ಮುಸ್ಲಿಂ ದ್ವೇಷದ ಕಡೆಗೆ ತಿರುಗಿಸಲು ಯತ್ನಿಸುತ್ತಿದೆ. ಅದರ ಭಾಗವಾಗಿಯೇ ಎನ್ಕೌಂಟರ್, ಯುಪಿ ಮಾದರಿ, ಬುಲ್ಡೋಜರ್ ಬಳಕೆಯ ಮಾತುಗಳನ್ನು ತೇಲಿ ಬಿಡಲಾಗುತ್ತಿದೆ. ಇದು ತೀರಾ ಖಂಡನೀಯ ನಡೆ. ಜನತೆ ಇಂತಹ ಹಿಂಸಾತ್ಮಕ ರಾಜಕಾರಣದ ಆಳ ಅಗಲಗಳನ್ನು ಅರ್ಥ ಮಾಡಿಕೊಳ್ಳಬೇಕು. ಈಗಾಗಲೆ ಆರ್ಥಿಕ ಹಿನ್ನಡೆಗಳು, ಕೊರೋನಾ ಸಂದರ್ಭದ ತಪ್ಪಾದ ನಿರ್ವಹಣೆಗಳು ಜನಸಾಮಾನ್ಯರ ಬದುಕನ್ನು ಹೈರಾಣಗೊಳಿಸಿದೆ. ಈಗ ನಿಷೇಧಾಜ್ಞೆ, ಸಾಯಂಕಾಲದ ನಂತರ ವ್ಯಾಪಾರ ವಹಿವಾಟು, ದುಡಿಮೆಗಳ ಮೇಲಿನ ನಿರ್ಬಂಧ ದಿನ ನಿತ್ಯದ ಬದುಕಿನ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ರಾಜಕೀಯ ಪ್ರೇರಿತವಾದ ಮತೀಯ ದ್ವೇಷಕ್ಕೆ ತಡೆ ಹಾಕದಿದ್ದಲ್ಲಿ ನಿರುದ್ಯೋಗ, ಬಡತನದ ತೀವ್ರತೆ ಮತ್ತಷ್ಟು ಹೆಚ್ಚಳಗೊಳ್ಳಲಿದೆ. ಕೋಮುವಾದದ ರಾಜಕಾರಣವನ್ನು ತಿರಸ್ಕರಿಸಿ, ಹಿಂದು ಮುಸ್ಲಿಂ ಐಕ್ಯತೆಯನ್ನು ಎತ್ತಿ ಹಿಡಿಯುವ ಮೂಲಕ ಜಿಲ್ಲೆಯ ಜನತೆ ಪ್ರಜ್ಞಾವಂತಿಕೆ ಮೆರೆಯಬೇಕು ಎಂದು ಎಡ ಹಾಗೂ ಜಾತ್ಯಾತೀತ ಪಕ್ಷ, ಸಂಘಟನೆಗಳ ಮುಖಂಡರು ಜಂಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಯಾದವ ಶೆಟ್ಟಿ (ಕಾರ್ಯದರ್ಶಿ, ಸಿಪಿಐಎಂ ದಕ್ಷಿಣ ಕನ್ನಡ), ವಿ ಕುಕ್ಯಾನ್ (ಕಾರ್ಯದರ್ಶಿ, ಸಿಪಿಐ ದಕ್ಷಿಣ ಕನ್ನಡ ಜಿಲ್ಲೆ), ಮುನೀರ್ ಕಾಟಿಪಳ್ಳ (ರಾಜ್ಯ ಅಧ್ಯಕ್ಷರು, ಡಿವೈಎಫ್ಐ ಕರ್ನಾಟಕ), ಯಶವಂತ ಮರೋಳಿ ( ಜಿಲ್ಲಾ ಅಧ್ಯಕ್ಷರು, ಅಖಿಲ ಭಾರತ ವಕೀಲರ ಸಂಘ), ದಿನೇಶ್ ಹೆಗ್ಡೆ ಉಳೇಪಾಡಿ (ಖ್ಯಾತ ವಕೀಲರು), ಎಚ್ ವಿ ರಾವ್ (ಎಐಟಿಯುಸಿ ಜಿಲ್ಲಾ ಅಧ್ಯಕ್ಷರು), ಸುನಿಲ್ ಕುಮಾರ್ ಬಜಾಲ್ (ಸಿಐಟಿಯು ದ.ಕ. ಜಿಲ್ಲಾ ಕಾರ್ಯದರ್ಶಿ), ಬೊಂಡಾಲ ಚಿತ್ತರಂಜನ್ ಶೆಟ್ಟಿ (ಇಂಟಕ್ ದ.ಕ. ಜಿಲ್ಲಾ ಕಾರ್ಯದರ್ಶಿ) ಕರುಣಾಕರ ಮಾರಿಪಳ್ಳ (ಎಐವೈಎಫ್ ದ.ಕ. ಜಿಲ್ಲಾ ಉಪಾಧ್ಯಕ್ಷರು) ಸಂತೋಷ್ ಬಜಾಲ್ (ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka