ಸಿಡಿ ಭೀತಿ: ಸರ್ಕಾರಿ ಕಾರ್ಯಕ್ರಮದಲ್ಲಿ ಫೋನ್ ನಲ್ಲಿಯೇ ಬ್ಯುಸಿಯಾದ ಇಬ್ಬರು ಸಚಿವರು
ಬೆಂಗಳೂರು: ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಆರೋಗ್ಯ ಹಾಗೂ ವೈದ್ಯಕೀಯ ಸಚಿವ ಸುಧಾಕರ್ ಸರ್ಕಾರಿ ಕಾರ್ಯಕ್ರಮದಲ್ಲಿ ಆತಂಕದಲ್ಲಿರುವುದು ಕಂಡು ಬಂತು. ರಮೇಶ್ ಜಾರಕಿಹೊಳಿ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಬೆನ್ನಲ್ಲೇ ಹಲವ ಸಚಿವರಿಗೆ ಸಿಡಿ ಭೀತಿ ಎದುರಾಗಿದೆ.
ರಾಸಲೀಲೆ ಸಿಡಿ ಹೊರ ಬೀಳುತ್ತಿದ್ದಂತೆಯೇ ಆರು ಸಚಿವರು ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ವರದಿ ಪ್ರಸಾರ ಮಾಡಬಾರದು ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಈ 6 ಮಂದಿ ಸಚಿವರ ಪೈಕಿ ಸುಧಾಕರ್, ಬಿ.ಸಿ.ಪಾಟೀಲ್ ಕೂಡ ಸೇರಿದ್ದಾರೆ.
ಗಂಗಾವತಿಯಲ್ಲಿ ನಡೆಯುತ್ತಿರುವ ನೂತನ ಕೃಷಿ ವಿಶ್ವವಿದ್ಯಾಲಯದ ಪ್ರಾರಂಭೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಪಾಟೀಲ್ ಫೋನ್ ನಲ್ಲಿ ಬ್ಯುಸಿ ಇದ್ದರು. ಕೋರ್ಟ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಫೋನ್ ನಲ್ಲಿ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.ಇನ್ನೂ ಬಿ.ಸಿ.ಪಾಟೀಲ್ ಅವರು ಕಾರ್ಯಕ್ರಮವನ್ನು ಬೇಗ ಬೇಗ ಮುಗಿಸಿ ಎಂದು ಅಧಿಕಾರಿಗಳಿಗೆ ಹೇಳುತ್ತಿದ್ದರು ಎಂದು ಹೇಳಲಾಗಿದೆ.
ಗಂಗಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಸಿ.ಪಾಟೀಲ್ ಬ್ಯುಸಿಯಾಗಿದ್ದರೆ, ಚಿಕ್ಕಬಳ್ಳಾಪುರದಲ್ಲಿ ನಡೆದ ಬೃಹತ್ ಕ್ಯಾನ್ಸರ್ ತಪಾಸಣಾ ಹಾಗೂ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಧಾಕರ್ ಫೋನ್ ನಲ್ಲಿ ಬ್ಯುಸಿಯಾಗಿ ಕೋರ್ಟ್ ವಿವರಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.