ಸರ್ಕಾರಿ ನೌಕರರಿಗೆ ಮೂಗುದಾರ ಹಾಕಿದ ಸರ್ಕಾರ | ಇನ್ನೂ ಈ ಕೆಲಸಗಳನ್ನು ಮಾಡಲೇ ಬಾರದಂತೆ
ಬೆಂಗಳೂರು: ಸರ್ಕಾರಿ ಹುದ್ದೆಯಲ್ಲಿದ್ದರೂ ವಿವಿಧ ಚಟುವಟಿಕೆಗಳನ್ನು ಮಾಡುತ್ತಾ, ಸರ್ಕಾರಿ ಕೆಲಸದ ಸಮಯವನ್ನು ವೈಯಕ್ತಿಕ ಕೆಲಸಕ್ಕೆ ಬಳಸುವುದು, ಟಿವಿ, ರೇಡಿಯೋ, ಪತ್ರಿಕೆಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಈ ಮೊದಲಾದ ಸರ್ಕಾರಿ ನೌಕರರ ಚಟುವಟಿಕೆಗಳಿಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆ ನಿಯಮ -2020 ಕರಡನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದೆ. ಇದರ ಪ್ರಕಾರ, ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸುವುದನ್ನು ನಿರ್ಬಂಧಿಸಲಾಗಿದೆ.
ಸರ್ಕಾರಿ ನೌಕರರು ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದ ಹೊರತು ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸುವಂತಿಲ್ಲ. ಅಂತಹ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು ಎಂದು ಹೇಳಲಾಗಿದೆ.
ಸರ್ಕಾರಿ ನೌಕರರು ಸಂಬಂಧಿತ ಪ್ರಾಧಿಕಾರದ ಅನುಮತಿಯನ್ನು ಪಡೆಯದೆ ಪತ್ರಿಕೆ ಅಥವಾ ನಿಯತಕಾಲಿಕೆಗಳ ಸಂಪಾದನೆ, ಪ್ರಕಟಣೆ, ನಿರ್ವಹಣೆಯಲ್ಲಿ ತೊಡಗಿಕೊಳ್ಳಬಾರದು. ರೇಡಿಯೋ, ಟಿವಿ ಸೇರಿದಂತೆ ಯಾವುದೇ ಪ್ರಾಯೋಜಿತ ಮಾಧ್ಯಮ ಕಾರ್ಯಕ್ರಮಗಳಲ್ಲಿ ಮತ್ತು ಸರ್ಕಾರಿ ಮಾಧ್ಯಮದಲ್ಲಿನ ಹೊರಗಿನಿಂದ ನಿರ್ಮಾಣವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಹೇಳಿದೆ.
ಸಾಹಿತ್ಯ, ನಾಟಕ, ಪ್ರಬಂಧ, ಕವನ, ಸಣ್ಣಕಥೆ ಕಾದಂಬರಿಗಳನ್ನು ಪೂರ್ವಾನುಮತಿ ಪಡೆಯದೇ ಬರೆಯಲು ಅವಕಾಶವಿದೆ. ಅಂತಹ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಸಮಯ ಮತ್ತು ಸ್ಥಾನವನ್ನು ಬಳಕೆ ಮಾಡಿಕೊಳ್ಳಬಾರದು. ಯಾರ ಮೇಲೆಯೂ ಪ್ರಭಾವ ಬೀರಬಾರದು. ಯಾವುದೇ ಆಕ್ಷೇಪಾರ್ಹ ಬರಹ ಪ್ರಕಟಿಸಬಾರದು ಎಂದು ಹೇಳಲಾಗಿದೆ. ಜೊತೆಗೆ ಸರ್ಕಾರಿ ಹುದ್ದೆಯಲ್ಲಿದ್ದವರು ಯಾರದ್ದೇ ಉಡುಗೊರೆ,ಅದ್ದೂರಿ ಆತಿಥ್ಯ ಸ್ವೀಕರಿಸಬಾರದು ಎಂದು ಹೇಳಲಾಗಿದೆ.