ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಮೃತ ಸರ್ಕಾರಿ ನೌಕರನ ವಿವಾಹಿತ ಪುತ್ರಿಗೂ ಅನುಕಂಪದ ಉದ್ಯೋಗಕ್ಕೆ ಅವಕಾಶ
ಬೆಂಗಳೂರು: ಮೃತ ಸರ್ಕಾರಿ ನೌಕರನ ವಿವಾಹಿತ ಪುತ್ರಿಯೂ ಅನುಕಂಪದ ಉದ್ಯೋಗಕ್ಕೆ ಅರ್ಹರಾಗಿರುತ್ತಾಳೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮದುವೆಯಾಗಿದೆ ಎನ್ನುವ ಕಾರಣಕ್ಕೆ ಆಕೆಗೆ ನೀಡುವ ಉದ್ಯೋಗವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅಡ್ಡಿಯಾಗಿದ್ದ ಕರ್ನಾಟಕ ನಾಗರಿಕ ಸೇವೆಗಳು ಅಂದರೆ, ಅನುಕಂಪದ ಆಧಾರದಲ್ಲಿ ನೇಮಕಾತಿ ಅಧಿನಿಯಮ 1996ರ ನಿಯಮ 2(1)(ಎ)(ಐ), ನಿಯಮ 2(1)(ಬಿ) ಮತ್ತು 3(2)(ಐ)(ಸಿ) ಅಕ್ರಮ ಮತ್ತು ಸಂವಿಧಾನ ಬಾಹಿರ ಎಂದು ಹೇಳಿರುವ ಕೋರ್ಟ್, ಈ ನಿಯಮದಲ್ಲಿದ್ದ ‘ಅವಿವಾಹಿತ’ ಪದವನ್ನು ತೆಗೆದುಹಾಕಿದೆ.
ಭುವನೇಶ್ವರಿ ಪುರಾಣಿಕ್ ಎಂಬವರು ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅಡ್ಡಿಯಾಗಿರುವ ಬಗ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶವನ್ನು ನೀಡಿದೆ.
ವಿವಾಹಿತೆಯಾದರೂ ಹೆತ್ತವರಿಗೆ ಪುತ್ರಿಯೇ ಆಗಿದ್ದಾಳೆ. ಲಿಂಗ ತಾರತಮ್ಯದ ಭಾಗವಾಗಿ ವಿವಾಹಿತ ಪುತ್ರಿಗೆ ಉದ್ಯೋಗದಲ್ಲಿ ಅರ್ಹತೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪುತ್ರನಿಗೆ ವಿವಾಹದ ಬಳಿಕವೂ ಅನುಕಂಪದ ಉದ್ಯೋಗ ಪಡೆಯಲು ಅರ್ಹತೆ ಇರುವಾಗ ಮಗಳು ಕೂಡ ಅರ್ಹತೆ ಪಡೆದಿರುತ್ತಾಳೆ ಎಂದು ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ.